Advertisement

ಮರಗಳ ಮಾರಣಹೋಮ, ಪಕ್ಷಿಗಳ ಮರಣ ಮೃದಂಗ

06:00 AM Jan 08, 2018 | |

ಕೆ.ಆರ್‌.ಪೇಟೆ: ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಆವರಣದಲ್ಲಿದ್ದ ಮರಗಳನ್ನು ಇಲಾಖೆ ಅಧಿಕಾರಿಗಳು ಕಡಿದು ಹಾಕಿದ್ದು, ಈ ಮರಗಳನ್ನೇ ಆಶ್ರಯಿಸಿದ್ದ ವಿವಿಧ ಜಾತಿಯ ಪಕ್ಷಿಗಳು ಸಾವಿಗೀಡಾಗಿವೆ. ಈ ಕೃತ್ಯವೆಸಗಿರುವ ಅಧಿಕಾರಿಗಳ ವಿರುದ್ಧ ಪಕ್ಷಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ ಕಾವೇರಿ ನೀರಾವರಿ ನಿಗಮದ ಹೇಮಾವತಿ ಜಲಾಶಯ ಯೋಜನೆ ಕಚೇರಿ ಮತ್ತು ವಸತಿ ಸಮುಚ್ಚಯದೊಳಗೆ ಸುಮಾರು 50ಕ್ಕೂ ಹೆಚ್ಚು ಮರಗಳಿವೆ. ವಿವಿಧ ಬಗೆಯ ನೂರಾರು ಪಕ್ಷಿಗಳು ಇದೇ ಮರಗಳನ್ನೇ ಆಶ್ರಯಿಸಿಕೊಂಡಿದ್ದವು.

ಹಕ್ಕಿಜ್ವರದ ನೆಪ: ಸುಮಾರು 30ರಿಂದ 40ಮರಗಳನ್ನು ಕಡಿದಿರುವುದಕ್ಕೆ ನಿಗಮದ ಅಧಿಕಾರಿಗಳು ಹಕ್ಕಿಜ್ವರದ ನೆಪವೊಡಿದ್ದಾರೆ. ಹಕ್ಕಿಜ್ವರದ ಸೋಂಕಿನಿಂದ ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್‌ ಹಕ್ಕಿಗಳು ಸಾವನ್ನಪ್ಪಿದ್ದವು ಎಂದಿದ್ದಾರೆ. ಹಕ್ಕಿಜ್ವರದ ಭೀತಿ ಇದ್ದಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಅರಣ್ಯ ಇಲಾಖೆಯವರ ನೆರವಿನೊಂದಿಗೆ ಮರದ ಬುಡಕ್ಕೆ ಔಷಧ ಸಿಂಪಡಿಸುವುದು ಸಾಮಾನ್ಯ ಜಾnನ. ಅದನ್ನು ಬಿಟ್ಟು ಮರದ ಬುಡವನ್ನೇ ಕತ್ತರಿಸಿರುವ ನಿಗಮದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ.

ಇಲಾಖೆ ಅಧಿಕಾರಿಗಳಿಗೆ ತರಾಟೆ: ಮರದಲ್ಲಿ ವಾಸವಿದ್ದ ಪಕ್ಷಿಗಳು ಹಾಕುವ ಇಕ್ಕೆಯಿಂದ ಕಚೇರಿಯ ಆವರಣ ಮಲಿನಗೊಳ್ಳುತ್ತಿದೆ ಎಂಬ ಕಾರಣದಿಂದ ಹೀಗೆ ಮಾಡಿದ್ದಾರೆ. ಮನುಷ್ಯರಂತೆ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಮರ ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದೀರಾ? ಎಂದು ಎಂಜಿನಿಯರ್‌ಗಳನ್ನು ಆಸರೆ ಮಂಜುನಾಥ್‌ ತರಾಟೆಗೆ ತೆಗೆದುಕೊಂಡರು. ಅವರೊಂದಿಗೆ ಸಾರ್ವಜನಿಕರು ನೀರಾವರಿ ನಿಗಮದ ಎಂಜಿನಿಯರ್‌ಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕ್ರಮದ ಭರವಸೆ: ತಾಲೂಕು ಅರಣ್ಯ ಅಧಿಕಾರಿ ರವೀಂದ್ರ ಹಾಗೂ ಉಪ ಅರಣ್ಯಾಧಿಕಾರಿ ರಾಘವೇಂದ್ರ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಸಾವಿಗೀಡಾಗಿರುವ ಪಕ್ಷಿಗಳು, ಕಡಿದುಹಾಕಿದ್ದ ಮರಗಳನ್ನು ವೀಕ್ಷಿಸಿದರು. ಅಧಿಕಾರಿಗಳು ಅನುಮತಿಯಿಲ್ಲದೆ ಏಕಾಏಕಿ ಮರಗಳನ್ನು ಕಡಿದು ಹಾಕಿದ್ದಾರೆ. ಇದರಿಂದ ನೂರಾರು ಪಕ್ಷಿಗಳ ಸಾವಿಗೆ ಕಾರಣವಾಗಿರುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಪರಾಧ. ಹೀಗಾಗಿ ಕಠಿಣ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದರು.

Advertisement

ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಕಾರಣ ಮರದ ಕೊಂಬೆಗಳನ್ನು ಕತ್ತರಿಸಿ ಪಕ್ಷಿಗಳನ್ನು ಬೇರೆಡೆಗೆ ಹೋಗುವಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಮರದಲ್ಲಿ ಪಕ್ಷಿಗಳು ಗೂಡುಕಟ್ಟಿ ಮರಿ ಹಕ್ಕಿಗಳೊಂದಿಗೆ ವಾಸಿಸುತ್ತಿರುವುದು ನಮ್ಮ ಅರಿವಿಗೆ ಬಂದಿರಲಿಲ್ಲ. ಮರಗಳನ್ನು ಸಂಪೂರ್ಣವಾಗಿ ಕಡಿಯದೆ ಕೇವಲ ರೆಂಬೆ-ಕೊಂಬೆಗಳನ್ನು ಮಾತ್ರ ಕತ್ತರಿಸಿದ್ದೇವೆ.
– ನಾರಾಯಣ, ಕಾರ್ಯಪಾಲಕ ಅಭಿಯಂತರ, ಕಾವೇರಿ ನೀರಾವರಿ ನಿಗಮ
 

Advertisement

Udayavani is now on Telegram. Click here to join our channel and stay updated with the latest news.

Next