ಮಾಲೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯು ಸಾವನ್ನಪ್ಪಿರುವ ಕಾರಣ ತಾಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಮೃತನು ಟ್ರಕ್ ಚಾಲಕ ಮನೋಹರ್(60) ಆಗಿದ್ದು, ತಡರಾತ್ರಿ 11 ಗಂಟೆಯಲ್ಲಿ ಅತಿಯಾದ ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಆರಂಭಿಸಿದ್ದರಾದರೂ ಸ್ವಲ್ಪ ಸಮಯ ದಲ್ಲೇ ಮೃತಪಟ್ಟಿದ್ದ. ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ಸ್ಥಳೀಯ ಕೈಗಾರಿಕಾ ಪ್ರಾಂಗಣದ ಕಾರ್ಖಾನೆಯ ಟ್ರಕ್ ಚಾಲಕನಲ್ಲಿ ದೃಢ ಪಟ್ಟಿರುವ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಮಾಲೂರು ತಾಲೂಕಿನ ಪ್ರಥಮ ಕೊರೊನಾ ಪ್ರಕರಣವಾಗಿತ್ತು.
ಮೃತವ್ಯಕ್ತಿಯು ಮಹಾರಾಷ್ಟ್ರದ ಸೋಂಕಿತ ಪ್ರದೇಶದವನಾಗಿದ್ದ ಕಾರಣ, ಕೊರೊನಾ ಶಂಕೆ ಯಿಂದ ಮೃತವ್ಯಕ್ತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆಸ್ಪತ್ರೆಯ ವೈದ್ಯರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದರು. ಸುದ್ದಿ ಹರಡುತ್ತಿದ್ದಂತೆ ಪಟ್ಟಣದ ಜನರಲ್ಲಿ ಅತಂಕ ಹೆಚ್ಚಾಗಿದ್ದು, ಮೃತ ದೇಹವನ್ನು ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸಾಗಿಸುವವರೆಗೂ ಆಸ್ಪತ್ರೆ ಸೀಲ್‌ಡೌನ್ ಮಾಡಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯ ಒಳ ಮತ್ತು ಹೊರ ಆವರಣದಲ್ಲಿ ರಾಸಾಯನಿಕ ಸಿಂಪಡಿಸಲಾಗಿದ್ದು, ಶವವನ್ನು ಸಾಗಿಸಿದ ನಂತರ ಹೊರರೋಗಿಗಳಿಗೆ ಚಿಕಿತ್ಸೆ ಆರಂಭಿಸಲಾಯಿತು. ಈ ಬಗ್ಗೆ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೇರಿ 9 ಮಂದಿ ಯನ್ನು ಕ್ವಾರಂಟೈನ್ ಮಾಡಿದ್ದು, ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೇಗೆ ಕಳುಹಿಸಲಾಗಿದೆ ಎಂದರು.