Advertisement

ಶ್ವಾನದ ಸಾವಿಗೆ ಮರುಗಿದ ಗ್ರಾಮ

07:20 AM Sep 14, 2017 | |

ಕಲ್ಲಿಕೋಟೆ: ಸೆಪ್ಟೆಂಬರ್‌ 8ರ ಮುಂಜಾನೆ ಕೇರಳದ ಅಝಿಯೂರ್‌ ಸಮೀಪದ ಕುಂಜಿಪಲ್ಲಿ ಗ್ರಾಮದಲ್ಲಿ ಒಂದು ಸಾವು ಸಂಭವಿಸಿತ್ತು. ಆ ಸಾವಿನಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿತ್ತು. ಊರಲ್ಲೆಲ್ಲಾ ಕಪ್ಪು ಧ್ವಜಗಳು ಹಾರಾಡಿದವು. ರಸ್ತೆ, ಬೀದಿ, ಗಲ್ಲಿಗಳಲ್ಲಿ ಫ್ಲೆಕ್ಸ್‌ ಬೋರ್ಡ್‌ಗಳು ನೇತಾಡಿದವು. ನಮ್ಮೆಲ್ಲರ ರಕ್ಷಕನಾಗಿದ್ದ “ಅಲಿ ಅಪ್ಪು’ವನ್ನು ಕೊಂದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಇಡೀ ಕುಂಜಿಪಲ್ಲಿ ಘೋಷಣೆ ಕೂಗಿತು. “ಅಲಿ ಅಪ್ಪು’ ಅಲ್ಲಿನ ಬೀದಿ ನಾಯಿ!

Advertisement

“ಸಮಾಜಘಾತುಕರು ನಮ್ಮ ಅಲಿ ಅಪ್ಪುವನ್ನು ಕೊಂದಿದ್ದಾರೆ. ಓ ಹಂತಕರೇ ನೀವು ನಮ್ಮ ರಕ್ಷಕನನ್ನಷ್ಟೇ ಕೊಂದಿಲ್ಲ. ನಮ್ಮ ಬದುಕಿನ ನೆಮ್ಮದಿಯನ್ನೇ ಕೊಂದಿದ್ದೀರಿ, ನೀವ್ಯಾರೆಂದು ಬೆಳಕಿಗೆ ತಂದೇ ತೀರುತ್ತೇವೆ,’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಸಾಮಾನ್ಯ ಬೀದಿ ನಾಯಿ ಸತ್ತಿದ್ದಕ್ಕೆ ಇಷ್ಟೊಂದು ರಂಪವಾ? ಎಂಟು ವರ್ಷಗಳ ಹಿಂದೆ ಪುಟ್ಟ ಹೆಜ್ಜೆ ಇಟ್ಟುಕೊಂಡು ಶ್ವಾನದ ಮರಿಯೊಂದು ಕುಂಜಿಪ್ಪಿ ಪ್ರವೇಶಿಸಿತು. ಯಾರೋ ಅದಕ್ಕೆ “ಅಲಿ ಅಪ್ಪು’ ಎಂದು ಹೆಸರಿಟ್ಟರು. ಅಂದಿನಿಂದ ಗ್ರಾಮದ ಅರ್ಧದಷ್ಟು ಮನೆಗಳನ್ನು ಕಾಯುವ ಕಾರ್ಯಭಾರ ಹೊತ್ತ ಅಲಿ ಅಪ್ಪು, ಸರಿರಾತ್ರಿ ಹೊತ್ತಲ್ಲಿ ಅದೆಷ್ಟೋ ಕಳ್ಳರನ್ನು ಹಿಮ್ಮೆಟ್ಟಿಸಿ, ಜನರ ಹಣ ಆಸ್ತಿ ಕಾಪಾಡಿದ್ದ.

ಆದರೆ ಸೆಪ್ಟೆಂಬರ್‌ 5ರಂದು ಯಾರೋ ಪಾಪಿಗಳು ಅಲಿ ಅಪ್ಪುವಿನ ನಾಲಿಗೆ ಕತ್ತರಿಸಿ ಬಿಟ್ಟಿದ್ದಾರೆ. ನರಳುತ್ತಾ ಬಿದ್ದಿದ್ದ ಅಲಿಗೆ ಎಷ್ಟೇ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ. ಸೆ.8ರಂದು ಗ್ರಾಮಸ್ಥರೇ ಅಲಿ ಅಪ್ಪುವಿನ ಅಂತ್ಯ ಸಂಸ್ಕಾರ ಮಾಡಿದರು. ಅಂದು ಇಡೀ ಗ್ರಾಮ ಆತನ ಅಂತಿಮ ದರ್ಶನ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next