Advertisement

ಕಡಿದು ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ತಂದೆ, ಮಗಳ ಸಾವು

09:29 AM Jun 12, 2019 | Vishnu Das |

ಪುಂಜಾಲಕಟ್ಟೆ: ಗಾಳಿ-ಮಳೆಯಿಂದಾಗಿ ತೋಟದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಆಕಸ್ಮಿಕವಾಗಿ ತುಳಿದ ತಂದೆ, ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ಬಾರೆಕ್ಕಿನಡಿಯಲ್ಲಿ ಮಂಗಳವಾರ ಸಂಭವಿಸಿದೆ.

Advertisement

ಬಾರೆಕ್ಕಿನಡಿಯ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಶೆಟ್ಟಿ (65) ಮತ್ತು ಪುತ್ರಿ ದಿವ್ಯಶ್ರೀ (29) ಮೃತಪಟ್ಟವರು.
ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಗೋಪಾಲಕೃಷ್ಣ ಅವರು ಮಗಳೊಂದಿಗೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದು, ಆ ಸಂದರ್ಭ ಕಡಿದು ಬಿದ್ದಿದ್ದ ಹಳೆಯ ವಿದ್ಯುತ್‌ ತಂತಿಯನ್ನು ಆಕಸ್ಮಿಕ ತುಳಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಇಬ್ಬರೂ ಮೃತಪಟ್ಟರು. ಸಂಜೆ ಬೀಸಿದ ಗಾಳಿಗೆ ಅಡಿಕೆ ಮರದ ಸೋಗೆ ವಿದ್ಯುತ್‌ ತಂತಿ ಮೇಲೆ ಬಿದ್ದು, ಅದು ಕಡಿದುಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಗೋಪಾಲಕೃಷ್ಣ ಶೆಟ್ಟಿ ಅವರು ಪತ್ನಿ ಗಿರಿಜಾ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೆಸ್ಕಾಂ ವಿರುದ್ಧ ಆಕ್ರೋಶ
ಘಟನ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದು, ಮೆಸ್ಕಾಂ ನಿರ್ಲಕ್ಷ Âದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಕಾಂನ ಹಿರಿಯ ಅ ಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಹಳೆಯದಾದ ತಂತಿಗಳನ್ನು ಬದಲಿಸದೆ ಇರುವುದು ಈ ಘಟನೆಗೆ ಕಾರಣವೆಂದು ನಾಗರಿಕರು ಆರೋಪಿಸಿದರು.

ಗೋಪಾಲಕೃಷ್ಣ ಅವರು ಚೆನ್ನೈತ್ತೋಡಿ ಗ್ರಾ.ಪಂ. ಮಾಜಿ ಸದಸ್ಯರು. ದಿವ್ಯಶ್ರೀ ಅಂಗವೈಕಲ್ಯ ಹೊಂದಿದ್ದು, ಅವಿವಾಹಿತೆಯಾಗಿದ್ದರು. ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಉಪತಹಶೀಲ್ದಾರ್‌ ರಾಜೇಶ್‌ ನಾಯ್ಕ, ಕಂದಾಯ ನಿರೀಕ್ಷಕ ನವೀನ್‌ ಬೆಂಜನಪದವು, ವೃತ್ತ ನಿರೀಕ್ಷಕ ಶರಣ ಗೌಡ, ಗ್ರಾಮಾಂತರ ಎಸ್‌ಐ ಸುಧಾಕರ ತೋನ್ಸೆ, ಮೆಸ್ಕಾಂ ಎಇಇ ಪ್ರಶಾಂತ್‌ ಪೈ ಸ್ಥಳಕ್ಕಾಗಮಿಸಿ ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಜನತಾ ಬಝಾರ್‌ನ ನಿರ್ದೇಶಕ ಪುರುಷೋತ್ತಮ ಶೆಟ್ಟಿ ವಾಮದಪದವು ಅವರಿಂದ ಮಾಹಿತಿ ಪಡೆದುಕೊಂಡರು. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement

ಪರಿಹಾರ ನೀಡಲುಮೆಸ್ಕಾಂಗೆ ಸೂಚನೆ
ಬೆಂಗಳೂರು ಪ್ರವಾಸದಲ್ಲಿರುವ ಶಾಸಕ ರಾಜೇಶ್‌ ನಾೖಕ್‌ ಅವರು ಮೆಸ್ಕಾಂ ಅ ಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಲ್ಲದೆ, ಮೃತರ ಕುಟುಂಬಕ್ಕೆ ಗರಿಷ್ಠ ಪ್ರಮಾಣ ಪರಿಹಾರ ನೀಡುವಂತೆ ಸೂಚನೆ ನೀಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌ ಅವರು ಆಸ್ಪತ್ರೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ
ಹೇಳಿ ಧೈರ್ಯ ತುಂಬಿದರು.

ಪತ್ನಿಗೆ ಆಘಾತ
ಪತಿ ಮತ್ತು ಪುತ್ರಿಯ ಸಾವಿನ ಸುದ್ದಿಗೆ ಪತ್ನಿ ಗಿರಿಜಾ ಶೆಟ್ಟಿ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ಅವರನ್ನು ಪುತ್ರ ತತ್‌ಕ್ಷಣ ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಹಶೀಲ್ದಾರ್‌ ರಶ್ಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ಕೆಲಸದಲ್ಲಿದ್ದು, ಮತ್ತೋರ್ವ ಮಗ ತಂದೆಯ ಕೃಷಿ ಕಾರ್ಯದಲ್ಲಿ ಸಹಕರಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next