Advertisement

ಸಾವು ಜೀವ ಉಳಿಸುವ ಮಾರ್ಗ ಪ್ರೇರೇಪಿಸಿದ ಒಂದು ಸತ್ಯ ಕಥೆ

11:37 AM Jul 10, 2019 | Team Udayavani |

ಹೊನ್ನಾವರ: ಆಸ್ಪತ್ರೆಗೆ ತಲುಪಲು ವಿಳಂಬವಾಗಿ ಪುಟ್ಟ ಮಕ್ಕಳ ಎದುರೇ ತಾಯಿ ಹೃದಯ ನಿಂತು ಹೋದಾಗ ಮಕ್ಕಳ ದುಃಖಕ್ಕೆ ಪಾರ ಇರುವುದಿಲ್ಲ. ಇಂತಹ ಇನ್ನೊಂದು ಘಟನೆ ಹೃದಯಾಘಾತವಾದವರು ಮಾರ್ಗ ಮಧ್ಯೆ ಸಾಯುವುದನ್ನು ತಪ್ಪಿಸುವ ಮಾರ್ಗ ಹುಡುಕಲು ಹೃದಯವಂತ ವೈದ್ಯರಿಗೆ ಪ್ರೇರಣೆ ನೀಡುತ್ತದೆ. ಒಂದು ಸತ್ಯ ಕಥೆ ನಿಮ್ಮ ಮುಂದಿದೆ.

Advertisement

ಮೂಡಿಗೆರೆ ತಾಲೂಕಿನ ಬಾಳೆಹೊನ್ನೂರಿನ 45 ವಯಸ್ಸಿನ ಮಹಿಳೆಗೆ ತಡೆಯಲಾರದ ಎದೆನೋವು ಬಂದು ಅಲ್ಲಿಯ ಆಸ್ಪತ್ರೆಗೆ ಹೋದಾಗ ಚಿಕಿತ್ಸೆಯ ಸೌಲಭ್ಯವಿರಲಿಲ್ಲ. ಮಂಗಳೂರಿಗೆ ಹೋಗಲು ಸಲಹೆ ನೀಡಿದರು. ಅಂಬ್ಯುಲೆನ್ಸ್‌ ಹುಡುಕಾಡಿ ಮಂಗಳೂರು ಹೃದಯತಜ್ಞರ ಸಲಹೆ ಪಡೆದು ಹೊರಟರು. ಹಾದಿ ಮಧ್ಯೆ ಕುದುರೆಮುಖ ರಸ್ತೆಗೆ ಅಡ್ಡ ದೊಡ್ಡ ಮರ ಬಿದ್ದ ಕಾರಣ ಎರಡು ತಾಸಿನ ನಂತರ ಮರ ತೆಗೆದ ಮೇಲೆ ಮಂಗಳೂರು ತಲುಪಲು ವಿಳಂಬವಾಗಿ ಪ್ರಾಣಪಕ್ಷಿ ಮಕ್ಕಳೆದುರು ಹಾರಿ ಹೋಯಿತು. ಇದರಿಂದ ತೀವ್ರ ನೊಂದುಕೊಂಡ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಹಳ್ಳಿಯಿಂದ ದೊಡ್ಡ ಆಸ್ಪತ್ರೆಗೆ ಬರುವವರೆಗೆ ಕ್ಷಣಕ್ಷಣಕ್ಕೆ ಹೃದಯ ಬಡಿತದ ಮಾಹಿತಿ ಪಡೆದು, ಸೂಕ್ತ ಕ್ರಮಕೈಗೊಳ್ಳಲು ಆಗುವಂತೆ ಮಾಡಲು ಹೊಸ ಯೋಜನೆ ರೂಪಿಸಿದ್ದಾರೆ.

ನೋಯ್ಡಾದ ಸಂಕೇತ ಲೈಫ್‌ ಇಸಿಜಿ ಉಪಕರಣ ಮೊಬೈಲ್ನಂತಿದೆ. 5000 ರೂ. ಬೆಲೆಬಾಳುವ ಈ ಉಪಕರಣ ಬಳಸಲು ಅಂಬ್ಯುಲೆನ್ಸ್‌ ಚಾಲಕರಿಗೆ ತರಬೇತಿ ಕೊಡುವುದು. ಇದನ್ನು ಎದೆಯ ಕೆಲವು ಭಾಗಗಳಲ್ಲಿಟ್ಟರೆ ಎರಡೂವರೆ ನಿಮಿಷದಲ್ಲಿ ಇಸಿಜಿ ವರದಿ ತಜ್ಞ ವೈದ್ಯರನ್ನು ವಾಟ್ಸ್‌ಅಪ್‌ ಮುಖಾಂತರ ತಲುಪುತ್ತದೆ. ತಕ್ಷಣ ತುರ್ತು ಮಾಡಬೇಕಾದ ಚಿಕಿತ್ಸೆ ವಿವರಿಸಿ, ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಲು ಅನುಕೂಲವಾಗುತ್ತದೆ. ದಾನಿಗಳ ಸಹಕಾರದಿಂದ ಇಂತಹ 10 ಮಿಶನ್‌ಗಳನ್ನು ಖರೀದಿಸಿ, ಉತ್ತರಕನ್ನಡ ಸಹಿತ ವಿವಿಧ ಭಾಗದ ಅಂಬ್ಯುಲೆನ್ಸ್‌ ಚಾಲಕರಿಗೆ ತರಬೇತಿ ನೀಡಿ, ಮಾರ್ಗ ಮಧ್ಯೆ ಆಗುವ ಸಾವು ತಪ್ಪಿಸಲು ಯೋಚಿಸಲಾಗಿದೆ. ಸಣ್ಣ ರಾಜ್ಯ ತ್ರಿಪುರಾದ ಅಗರ್ತಲಾದಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಂತಹ ಇಸಿಜಿ ಉಪಕರಣಗಳನ್ನು ಪೂರೈಸಲಾಗಿದೆ. ಇದು ಉಪಯುಕ್ತವಾಗಿ ಬಳಕೆಯಾಗುತ್ತಿದೆ. ದೊಡ್ಡ ಉಪಕರಣದಷ್ಟು ಸಾಮರ್ಥ್ಯ ಇಲ್ಲವಾದರೂ ರೋಗಿಯ ತುರ್ತು ಸಮಸ್ಯೆ ಅರಿಯಲು ಇದು ಸಹಕಾರಿ ಎಂದು ಡಾ| ಪದ್ಮನಾಭ ಕಾಮತ್‌ ಹೇಳಿದ್ದಾರೆ.

ಉತ್ತರಕನ್ನಡದ ಪ್ರತೀ ಆರೋಗ್ಯ ಕೇಂದ್ರಕ್ಕೂ ಇಂತಹ ಒಂದು ಉಪಕರಣ ಅತ್ಯಗತ್ಯವಾಗಿದೆ.

Advertisement

ಯಕ್ಷಗಾನ ಪ್ರಿಯರಾದ ಪದ್ಮನಾಭ ಕಾಮತ್‌ ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನಕ್ಕೆ ಹೋದಾಗ ಹೃದಯಾಘಾತವಾಗಿರುವುದು ವಿಳಂಬವಾಗಿ ಗೊತ್ತಾಗಿ ಆಸ್ಪತ್ರೆ ತಲುಪುವ ಮೊದಲೇ ಸಾಯುವುದನ್ನು ಕಂಡು ಸಿಎಡಿ (ಮನೆ ಬಾಗಿಲಿಗೆ ಹೃದಯ ವೈದ್ಯರು) ಯೋಜನೆ ಮುಖಾಂತರ ದಕ್ಷಿಣ ಕನ್ನಡ, ಮಲೆನಾಡಿನ 175 ಗ್ರಾಮೀಣ ಪ್ರದೇಶಗಳಿಗೆ ಇಸಿಜಿ ಉಪಕರಣ ದಾನಿಗಳಿಂದ ಕೊಡಲ್ಪಟ್ಟಿದ್ದು, ಕಾಮತ್‌ ಮತ್ತು ಅವರ ಬಳಗದ ವೈದ್ಯರು ತುರ್ತು ಸಂದೇಶಕ್ಕೆ ತಕ್ಷಣ ಸ್ಪಂದಿಸಿದ್ದು ಯೋಜನೆ ಯಶಸ್ವಿಯಾಗಿದೆ. ಮೂಡಿಗೆರೆಯ ಘಟನೆ ಡಾ| ಕಾಮತರಿಗೆ ಇನ್ನೂ ಒಂದು ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಲು ಪ್ರೇರಣೆ ನೀಡಿದೆ.

 

•ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next