ಉಡುಪಿ: ಮನುಷ್ಯನಿಗೆ ಘನತೆ ಯಿಂದ ಬದುಕುವ ಹಕ್ಕು ಇರುವಂತೆ ಘನತೆಯಿಂದ ಸಾಯುವ ಹಕ್ಕೂ ಇದೆ ಎಂದು ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.
ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಬುಧವಾರ ಜರಗಿದ “ಫಂಡಮೆಂಟಲ್ ರೈಟ್ ಟು ಡೈ ವಿದ್ ಡಿಗ್ನಿಟಿ’ (“ಲಿವಿಂಗ್ ವಿಲ್’ ಕುರಿತ ಚರ್ಚೆ) ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಕುರಿತು ತೀರ್ಪು ನೀಡಿದೆ. ಇದಕ್ಕೆ ಸೂಕ್ತ ಶಾಸನ ರೂಪುಗೊಳ್ಳಬೇಕಾಗಿದೆ ಎಂದರು.
2016ರಲ್ಲಿ ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾದರೂ ಕೋರಂ ಇಲ್ಲದೆ ಮುಂದುವರಿಯಲಿಲ್ಲ. ಈ ಕುರಿತು ವ್ಯಾಪಕ ಚರ್ಚೆಯಾಗಬೇಕು. ಚರ್ಚೆಯ ಬಳಿಕ ಸೂಕ್ತ ಶಾಸನ ರೂಪಣೆಗೆ ನಾವು ಮುಂದಡಿ ಇಡಬಹುದು ಎಂದು ಶಾನುಭಾಗ್ ಹೇಳಿದರು.
ಯಾವ ರೋಗ, ಯಾವ್ಯಾವ ಚಿಕಿತ್ಸೆಗಳಿವೆ, ಅಡ್ಡಪರಿಣಾಮಗಳೇನು, ಚಿಕಿತ್ಸೆಯ ಆಯ್ಕೆ, ಚಿಕಿತ್ಸೆಯ ನಿರಾಕರಣೆ ಇವೆಲ್ಲವನ್ನೂ ತಿಳಿಯುವುದು ರೋಗಿಯ ಹಕ್ಕುಗಳಾಗಿವೆ. ಒಂದು ವೇಳೆ ಪ್ರಜ್ಞೆ ಇಲ್ಲದಿದ್ದರೆ ವಾರಸುದಾರರಿಗೆ ರೋಗಿಯು ಬರೆದುಕೊಡಬಹುದು. ಇದನ್ನು ಅನುಷ್ಠಾನಗೊಳಿಸುವಲ್ಲಿ ಇನ್ನೂ ಸರಳ ನಿಯಮಗಳ ರೂಪಣೆಯಾಗಬೇಕಾಗಿದೆ. ಈ ಕುರಿತು ಜನಜಾಗೃತಿ ರೂಪಿಸಬೇಕಾಗಿದೆ ಎಂದರು.
ಎಂಡೋಸಲ್ಫಾನ್ ಕೀಟನಾಶಕದ ಪರಿಣಾಮವಾಗಿ ಸಾವಿರಾರು ಜನರು ಘನತೆಯಿಂದ ಬದುಕಲೂ ಆಗುತ್ತಿಲ್ಲ ಎಂದು ಹೇಳಿದ ಶಾನುಭಾಗ್, ಮೂರ್‍ನಾಲ್ಕು ದಶಕಗಳ ಹಿಂದೆ ಕೆರೆಮನೆ ಶಿವರಾಮ ಹೆಗಡೆಯವರು ಆಸ್ಪತ್ರೆಯೊಂದರಲ್ಲಿ ಕೊನೆ ಹಂತದಲ್ಲಿದ್ದಾಗ ನನ್ನನ್ನು ಕರೆಸಿ ಇಂತಹ ಯಾವ ಚಿಕಿತ್ಸೆಯೂ ತನಗೆ ಬೇಡ. ನನ್ನನ್ನು ಬಿಡುಗಡೆಗೊಳಿಸಿ ಎಂದಿದ್ದರು. ಅವರನ್ನು ಬಿಡುಗಡೆಗೊಳಿಸಿದ ಬಳಿಕ ಮನೆಗೆ ತೆರಳಿ ಪ್ರಾಣ ಬಿಟ್ಟರು. ಇದೇ ರೀತಿ ನನ್ನ ತಂದೆ ಸದಾನಂದ ಶಾನುಭಾಗರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದರು. 37 ವರ್ಷ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದ ಮುಂಬಯಿಯ ಅರುಣಾ ಶಾನುಭಾಗ್ ಕುರಿತೂ ವಿವರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ ರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್. ಮಾತನಾಡಿ, ಯಾವುದೋ ಒಂದು ಅಹಿತಕರ ಘಟನೆಯನ್ನು ಆಧರಿಸಿ ಮುಂದೆ ಇಂತಹ ಘಟನೆಗಳು ನಡೆಯಬಾರದೆಂದು ರಾಷ್ಟ್ರೀಯ ಪ್ರಾಧಿಕಾರದಂತಹ ಸಂಸ್ಥೆಗಳು ಮಾರ್ಗಸೂಚಿಗಳನ್ನು ಹೊರಡಿಸುತ್ತವೆ.
ಅನುಷ್ಠಾನದ ಹಂತದಲ್ಲಿ ನಿಯಮಗಳು ಸರಳವಾಗಿ ರೂಪುಗೊಳ್ಳಬೇಕಾಗಿದೆ. ಸಂವಿಧಾನ ರಚಿಸುವಾಗ ಕರ್ತವ್ಯಗಳೇನು ಎಂದು ಸೂಚಿಸುವ ಅಗತ್ಯವಿರಲಿಲ್ಲ. ಬಳಿಕ ಹಕ್ಕುಗಳ ಜತೆ ಕರ್ತವ್ಯಗಳನ್ನೂ ಸೇರಿಸುವಂತಾಯಿತು ಎಂದರು. ಕಾಲೇಜಿನ ನಿರ್ದೇಶಕಿ ಡಾ| ನಿರ್ಮಲಾ ಕುಮಾರಿ ಸ್ವಾಗತಿಸಿದರು.