Advertisement

ಮುಂಬೈ; ನಗ್ನವಾಗಿ ಶವ ಎಸೆದು ರಣಹದ್ದುಗಳಿಗೆ ನೀಡೋ ಪದ್ಧತಿ ಪಾರ್ಸಿಗಳಲ್ಲಿದೆ ಗೊತ್ತಾ?

11:08 AM Jun 12, 2020 | Nagendra Trasi |

ಮಣಿಪಾಲ:ಭಾರತದಲ್ಲಿ ನೂರಾರು ಭಾಷೆ, ನೂರಾರು ಜಾತಿ ಹೀಗೆ ಹಲವಾರು ವೈವಿಧ್ಯತೆಗಳಿಂದ ಕೂಡಿದೆ. ಇದರಲ್ಲಿ ಪಾರ್ಸಿ ಜನಾಂಗ ದೇಶದ ಇತಿಹಾಸ ಮತ್ತು ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಇದೇನು ಬಹುಸಂಖ್ಯಾತ ಜನಸಮುದಾಯವನ್ನು ಹೊಂದಿಲ್ಲ. ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿದ್ದರೂ ಕೂಡಾ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ.

Advertisement

ಪಾರ್ಸಿ ಎಂದರೆ ಸಂಸ್ಕೃತದಲ್ಲಿ ದಾನ ನೀಡುವವನು ಎಂದು ಅರ್ಥ. ಅವರು ಉದಾರ ದಾನಕ್ಕೆ ಮತ್ತು ನೆರವಿಗೆ ಹೆಸರಾದ ಜಾತಿಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಮುಂಬೈನಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಪಾರ್ಸಿಗಳು ಇಂದು ಇಡೀ ಮುಂಬೈನಲ್ಲಿ ಅತೀ ದೊಡ್ಡ ಪ್ರಾಬಲ್ಯ ಹೊಂದಿದವರು ಪಾರ್ಸಿಗಳಾಗಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾರ್ಸಿಗಳು ಬಹುಮುಖ್ಯವಾದ ಪಾತ್ರ ವಹಿಸಿದ್ದರು. ಫಿರೋಜ್ ಶಾ ಮೆಹ್ತಾ, ದಾದಾಭಾಯಿ ನವರೋಜಿ, ಭಿಕುಜಿ ಕ್ಯಾಮಾ ಮುಂತಾದವರು. ಅಷ್ಟೇ ಅಲ್ಲ ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಪಾರ್ಸಿಗಳ ಪಾತ್ರ ಅನನ್ಯವಾದದು. ಭೌತಶಾಸ್ತ್ರಜ್ಞ ಹೊಮಿ ಜೆ.ಭಾಭಾ, ಟಾಟಾ ಕುಟುಂಬ, ಗೋದ್ರೇಜ್ ಮತ್ತು ವಾಡಿಯಾ ಕುಟುಂಬದ ಕೈಗಾರಿಕೆಗಳು ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಭಾರತದ ಮೊದಲ ಭಾರತೀಯ ಸೈನ್ಯದ ಫೀಲ್ಡ್ ಮಾರ್ಷಲ್ ಸ್ಯಾಮ್ ಮನೆಕ್ ಕೂಡಾ ಪಾರ್ಸಿ ಜನಾಂಗಕ್ಕೆ ಸೇರಿದವರು.

ಮುಂಬೈಗೆ ಬಂದ ಪ್ರಥಮ ಪಾರ್ಸಿ ದೊರಾಬ್ಜಿ:
ಆ ಕಾಲದಲ್ಲಿ ಮುಂಬೈನ 7 ದ್ವೀಪಗಳು ಪೋರ್ಚುಗೀಸರ ಆಳ್ವಿಕೆಯಲ್ಲಿದ್ದವು. ದೊರಾಬ್ಜಿ ನಾನಾಭಾಯ್ ಎನ್ನುವ ಪಾರ್ಸಿ 1640ರಲ್ಲಿ ಮುಂಬೈಗೆ ಬಂದು ನೆಲಸಿದ ಪ್ರಥಮ ಪಾರ್ಸಿಯಾಗಿದ್ದಾರೆ. 1661ರಲ್ಲಿ ಮುಂಬೈ ಬ್ರಿಟಿಷರ ಅಧೀನಕ್ಕೆ ಬಂದಿತ್ತು. ಬ್ರಿಟಿಷರು ಮುಂಬೈನ ಪಾರ್ಸಿಗಳಿಗೆ ಮೊದಲು ದಖ್ಮಾ (Tower of silence) ಸ್ಥಳವನ್ನು ಬಿಟ್ಟುಕೊಟ್ಟಿದ್ದರು.

Advertisement

ಪಾರ್ಸಿಗಳ ನಂಬಿಕೆ, ದೇವರು; ಶವವನ್ನು ನಗ್ನವಾಗಿ ಎಸೆಯೋ ಪದ್ಧತಿ!
ಪಾರ್ಸಿಗಳು ಪರ್ಸಿಯಾ(ಇರಾನ್)ದಿಂದ ಸುಮಾರು ಒಂದು ಸಾವಿರ ವರ್ಷದ ಹಿಂದೆ ಭಾರತಕ್ಕೆ ಬಂದಿದ್ದು, ಇವರು ಝೋರಾಸ್ಟ್ರೀಯನ್ ಪಂಥದ ಮೇಲೆ ನಂಬಿಕೆ ಇಟ್ಟಿದ್ದಾರೆ. ಇವರು ತಮ್ಮದೇ ಆದ ಸ್ವಂತ ಆಚರಣೆ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಈ ಜನಾಂಗ ಭಾರತೀಯ ರಕ್ತಸಂಬಂಧ ಅಥವಾ ಸಾಂಸ್ಕೃತಿಕ ನಡೆನುಡಿ ಮತ್ತು ಧಾರ್ಮಿಕ ಆಚರಣೆಗಳೆಲ್ಲ ಸಂಪೂರ್ಣ ಭಿನ್ನವಾಗಿದೆ.

ಮುಂಬೈ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ವಾಸವಾಗಿರುವ ಪಾರ್ಸಿಗಳು ಸಂಪ್ರದಾಯದಂತೆ ಗಂಡಸು, ಹೆಂಗಸು, ಮಕ್ಕಳ ಶವವನ್ನು ಹೂಳುವುದಿಲ್ಲ, ಅಗ್ನಿಸ್ಪರ್ಶ ಮಾಡುವುದು ಇಲ್ಲ. ಯಾಕೆಂದರೆ ಶವವನ್ನು ಸುಡುವುದು, ಹೂಳುವುದು ಪಾರ್ಸಿಗಳ ಪ್ರಕಾರ ಪರಿಸರ ಮಾಲಿನ್ಯಕ್ಕೆ ಕಾರಣವಾಗಲಿದೆ ಎಂಬುದು ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಶವವನ್ನು ಮನೆಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಿ, ಅಂತಿಮ ಗೌರವ ಸಲ್ಲಿಸಿ “ಟವರ್ಸ್ ಆಫ್ ಸೈಲೆನ್ಸ್” ಪ್ರದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ನಗ್ನ ಶವವನ್ನು ಎಸೆಯುತ್ತಾರೆ. ಆಗ ರಣಹದ್ದುಗಳು, ಗಿಡುಗ, ಕಾಗೆಗಳು ಬಂದು ಶವವನ್ನು ತಿನ್ನುತ್ತವೆ.

ಭೂಮಿ, ಅಗ್ನಿ ಮತ್ತು ನೀರು ಪವಿತ್ರವಾದದ್ದು ಇವುಗಳನ್ನು ಅಪವಿತ್ರಗೊಳಿಸುವುದು ಪಾರ್ಸಿಗಳಿಗೆ ನಿಷಿದ್ಧ. ಇದರಿಂದಾಗಿ ದಹನ ಮತ್ತು ದಫನ್ ಪಾರ್ಸಿ ಸಂಸ್ಕೃತಿ ನಿಷೇಧಿಸುತ್ತದೆ.

ಮುಂಬೈನ ಡೋಂಗೆರ್ ವಾಡಿಯಲ್ಲಿ “ಟವರ್ಸ್ ಆಫ್ ಸೈಲೆನ್ಸ್” ಕಟ್ಟಲಾಗಿದೆ. ಆದರೆ ಮುಂಬೈ ಮತ್ತು ಕರಾಚಿ ಬಹಳಷ್ಟು ಬೆಳೆದು ನಗರೀಕರಣದಿಂದ ಅಪಾರ ಜನಸಂಖ್ಯೆಯನ್ನು ಹೊಂದಿದೆ. ಹೀಗೆ ಡೋಂಗೆರ್ ವಾಡಿಯಲ್ಲಿ ನಗ್ನವಾಗಿ ಶವವನ್ನು ಎಸೆದು ಹೋಗುತ್ತಿದ್ದು, ಸುತ್ತಮುತ್ತಲಿನ ಜನರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಯಾಕೆಂದರೆ ರಣಹದ್ದುಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಶವ ಕೊಳೆತು ಕೆಟ್ಟ ವಾಸನೆ ಬರುತ್ತಿದೆ ಎಂದು ದೂರಿದ್ದರು. ಇದರಿಂದಾಗಿ ಮುಂಬೈನ ಮಲ್ ಬಾರ್ ಹಿಲ್ಸ್ ನಲ್ಲಿರುವ ದ ಟವರ್ ಅಫ್ ಸೈಲೆನ್ಸ್ ನಲ್ಲಿ ಸೌರ ಪ್ಯಾನಲ್ ಅಳವಡಿಸುವ ಬಗ್ಗೆ ಪಾರ್ಸಿ ಜನಾಂಗದ ಜತೆ ಚರ್ಚೆ ನಡೆಯುತ್ತಿದೆ. ಆದರೆ ಮೂರು ಸಾವಿರ ವರ್ಷಗಳ ಸಂಪ್ರದಾಯವನ್ನು ಕೈಬಿಡಲು ಪಾರ್ಸಿಗಳು ನಿರಾಕರಿಸುತ್ತಿದ್ದಾರೆ ಎಂದು ದ ಗಾರ್ಡಿಯನ್ ಲೇಖನವೊಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next