ಒಬ್ಬ ರಾಜ ಇದ್ದ. ಆತ ತನ್ನ ಬಾಲ್ಯದಿಂದಲೂ ಮೂಢನಂಬಿಕೆಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದ. ಬೆಳಗ್ಗೆ ಎದ್ದ ಕೂಡಲೆ ಉದ್ಯಾನದಲ್ಲಿ ನಿರ್ಮಿಸಿದ್ದ ಸೂರ್ಯದೇವನ ಮೂರ್ತಿಗೆ ನಮಸ್ಕರಿಸದೇ ಯಾರ ಮುಖವನ್ನೂ ಆತ ನೋಡುತ್ತಿರಲಿಲ್ಲ.ಸೂರ್ಯನನ್ನು ನೋಡಿದ ಮೇಲೆಯೇ ತನ್ನ ದೈನಂದಿನ ಕೆಲಸ ಆರಂಭಿಸುತ್ತಿದ್ದ. ಒಂದು ವೇಳೆ ಬೇರೆಯವರ ಮುಖ ನೋಡಿದರೆ ಅಂದಿನ ಕೆಲಸಗಳು ನಡೆಯುವುದಿಲ್ಲ ಎಂಬುದು ಆತನ ನಂಬಿಕೆಯಾಗಿತ್ತು.
ಹೀಗಿರುವಾಗ ಒಮ್ಮೆ ರಾಜ ತನ್ನ ಪರಿವಾರದೊಂದಿಗೆ ಬೇಟೆಗೆ ಕಾಡಿಗೆ ತೆರಳಿದ. ಅಂದು ಒಂದೇ ಒಂದು ಬೇಟೆಯೂ ಸಿಗಲಿಲ್ಲ. ಯಾಕೆ ಹೀಗಾಯೆ¤ಂದು ಯೋಚಿಸುತ್ತ ಕುಳಿತಿರುವಾಗ ಬೆಳಗ್ಗೆ ಎದ್ದ ತಕ್ಷಣ ರೈತನ ಮುಖ ನೋಡಿದ್ದು ನೆನಪಾಯಿತು. ಕೂಡಲೇ ರಾಜನು ಕೋಪಗೊಂಡು, ಭಟರನ್ನು ಕರೆದು ಆ ರೈತನನ್ನು ಕರೆ ತರುವಂತೆ ಆದೇಶಿಸಿದ. ಮನೆಗೆ ಬಂದ ಭಟರಿಂದ ವಿಷಯ ತಿಳಿದ ರೈತನಿಗೂ ಒಂದು ಕ್ಷಣ ಭಯವಾಯಿತು. ಹೆದರಿಕೆಯಿಂದ ಕೈಕಾಲುಗಳೆಲ್ಲಾ ನಡುಗಿದವು. ಭಟರು ರೈತನನ್ನು ಕರೆತಂದು ರಾಜನ ಮುಂದೆ ನಿಲ್ಲಿಸಿದರು.
“ಇಂದು ಬೆಳಗ್ಗೆ ನನ್ನ ಆರಾಧ್ಯ ದೈವವನ್ನು ನೋಡುವ ಮೊದಲೇ ನಿನ್ನ ಮುಖ ನೋಡಿದೆ. ಅದೇ ಕಾರಣದಿಂದ ಇಂದು ಹೋದ ಕೆಲಸ ಆಗಲಿಲ್ಲ. ಹಾಗಾಗಿ ನಿನಗೆ ಮರಣದಂಡನೆ ವಿಧಿಸುತ್ತಿದ್ದೇನೆ’ ಎಂದು ರಾಜ ಆದೇಶಿಸಿದ. ರೈತನಿಗೆ ಇದರಿಂದ ದುಃಖವಾಯಿತು. ಆತ ಥರಥರ ನಡುಗತೊಡಗಿದ.
ನಂತರ ದೀನನಾಗಿ, “ಮಹಾಪ್ರಭು, ಈ ಬೆಳಗ್ಗೆ ಹೊಲದಲ್ಲಿ ಬೆಳೆದು ನಿಂತ ಬೆಳೆಯನ್ನು ನೋಡಲು ಹೊರಟಿದ್ದೆ. ನಾನು ಕೂಡ ಮೊದಲು ನಿಮ್ಮ ಮುಖವನ್ನೇ ನೋಡಿದ್ದು. ಅದರ ಫಲವಾಗಿ ಈಗ ನನಗೆ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿ’ ಎಂದ.
ಆಗ ಹತ್ತಿರದಲ್ಲಿದ್ದ ಅನುಭವಿ ಹಾಗೂ ಜ್ಞಾನವಂತನೂ ಆದ ಮಂತ್ರಿ ಧೈರ್ಯ ಮಾಡಿ ರಾಜನಿಗೆ ಹೀಗೆ ಸಲಹೆ ನೀಡಿದ – “ಪ್ರಭುಗಳೇ, ರೈತನ ಮಾತಿನಲ್ಲಿ ಸತ್ಯವಿದೆ. ನೀವು ಮೊದಲು ನೋಡಿದ್ದು ರೈತನನ್ನು. ರೈತನೂ ಮೊದಲು ನೋಡಿದ್ದು ನಿಮ್ಮನ್ನು. ನಿಮಗೆ ಬೇಟೆ ದೊರೆಯದಿದ್ದಕ್ಕೂ ನೀವು ರೈತನ ಮುಖ ನೋಡಿದ್ದಕ್ಕೂ ಸಂಬಂಧವಿಲ್ಲ. ರೈತನಿಗೆ ನೀವು ಶಿಕ್ಷೆ ವಿಧಿಸುವುದು ಸರಿಯಲ್ಲ. ಒಂದು ವೇಳೆ ಶಿಕ್ಷೆ ವಿಧಿಸಿದ್ದೇ ಆದರೆ, ರಾಜನ ಮುಖ ನೋಡಿದ್ದಕ್ಕೆ ರೈತನಿಗೆ ಶಿಕ್ಷೆಯಾಯಿತಂತೆ. ರಾಜನ ಮುಖ ನೋಡಿದ್ದಕ್ಕೆ ರೈತ ಸತ್ತು ಹೋದನಂತೆ ಎಂಬ ಮಾತುಗಳೆಲ್ಲ ಹುಟ್ಟಿಕೊಳ್ಳುತ್ತವೆ. ಅದರಿಂದ ನಿಮಗೆ ಕೆಟ್ಟ ಹೆಸರು ಬರುತ್ತದೆ’ ಎಂದ. ಮಂತ್ರಿಯ ಮಾತು ಕೇಳಿದ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ರೈತನ ಬಳಿ ಕ್ಷಮೆ ಕೋರಿ ಅವನನ್ನು ಊರಿಗೆ ಕಳಿಸಿಕೊಟ್ಟ.
– ಆದಿತ್ಯ ಹೆಚ್. ಎಸ್.