ಆರ್ಕಿಮಿಡೀಸ್ ಕೇವಲ ಗಣಿತಜ್ಞ ಮಾತ್ರನಾಗಿರದೆ, ಯುದ್ಧವಿದ್ಯೆಯಲ್ಲೂ ಪಳಗಿದ್ದ ತಂತ್ರಜ್ಞ. ರೋಮನ್ನರು ತನ್ನ ಊರನ್ನು ಸುತ್ತುವರಿಯುತ್ತಿದ್ದಾರೆನ್ನುವ ಸೂಚನೆ ಸಿಕ್ಕಿದಾಗ, ಅವರನ್ನು ಹಿಮ್ಮೆಟ್ಟಿಸಲು ಅವನು ಹಲವಾರು ತಂತ್ರಗಳನ್ನು ಹೆಣೆದಿದ್ದನಂತೆ. ದೊಡ್ಡ ಗಾಜಿನ ಮಸೂರಗಳನ್ನು ಮಾಡಿ, ರೋಮನ್ ಹಡಗುಗಳ ಮೇಲೆ ಸೂರ್ಯರಶ್ಮಿಯನ್ನು ಕೇಂದ್ರೀಕರಿಸಿ ಅವು ದಡ ಸೇರುವ ಮೊದಲೆ ಸುಟ್ಟುಹೋಗುವಂತೆ ವ್ಯವಸ್ಥೆ ಮಾಡಿದ್ದನೆಂದು ಹೇಳುತ್ತಾರೆ. ಆದರೆ, ಈ ಎಲ್ಲ ಅಡ್ಡಿ-ಆತಂಕಗಳನ್ನು ಎದುರಿಸಿ ರೋಮನ್ ಪಡೆ ಕೊನೆಗೂ ಸಿರಾಕ್ಯೂಸ್ ಪಟ್ಟಣವನ್ನು ಮುತ್ತಿತು. ರೋಮನ್ನರ ಸೇನಾಧಿಪತಿಯಾಗಿದ್ದ ಮಾರ್ಸೆಲಸ್‌ಗೆ ಆರ್ಕಿಮಿಡೀಸ್‌ನ ಬುದ್ಧಿಮತ್ತೆಯ ಬಗ್ಗೆ ತಿಳಿದಿತ್ತು. ಮಾತ್ರವಲ್ಲ ಆ ಮೇಧಾವಿಯ ಮೇಲೆ ಗೌರವ ಭಾವನೆಯೂ ಇತ್ತು. ಅವನು ಆರ್ಕಿಮಿಡೀಸ್‌ನನ್ನು ಭೇಟಿಯಾಗುವ ಇಚ್ಛೆಯಿಂದ ಅವನನ್ನು ಕರೆತರಲು ತನ್ನ ಸೈನಿಕರಿಗೆ ಹೇಳಿಕಳಿಸಿದ.
ಸೈನಿಕರು ಆರ್ಕಿಮಿಡೀಸ್‌ನ ಮನೆಗೆ ಬಂದಾಗ, ಅವನ್ಯಾವುದೋ ಗಣಿತ ಸಮಸ್ಯೆಯಲ್ಲಿ ಮುಳುಗಿಹೋಗಿದ್ದನಂತೆ. ನಾನು ಕರೆಯುವವರೆಗೂ ಒಳಗೆ ಬರತಕ್ಕದ್ದಲ್ಲ ಎಂದು ಅವನು ಹೇಳಿದ್ದು ಸೈನಿಕರಿಗೆ ಅಹಂಕಾರದ ಮಾತಂತೆ ಕೇಳಿಸಿತು. ಒಬ್ಬ ಸೇನಾನಿಯಂತೂ ದರ್ಪದಿಂದ ಏರಿಹೋಗಿ ಆರ್ಕಿಮಿಡೀಸ್‌ನನ್ನು ಕೊಂದೇಬಿಟ್ಟ! ತನ್ನ ಜೀವಮಾನವಿಡೀ ಬುದ್ಧಿಯ ಬಲದಿಂದ ಬದುಕಿದ ಮೇರು ಗಣಿತಜ್ಞ 75ನೆಯ ವಯಸ್ಸಿನಲ್ಲಿ ಹೀಗೆ ಬುದ್ಧಿಗೇಡಿ ಸೈನಿಕನಿಂದ ತೀರಿಕೊಳ್ಳುವಂತಾಯಿತು.
18ನೇ ಶತಮಾನದಲ್ಲಿ, ಸೊಫೀ ಜರ್ಮೇನ್ ಎಂಬ 13 ವರ್ಷದ ಹುಡುಗಿ ಈ ಕತೆಯನ್ನು ಓದಿ ತಲ್ಲಣಿಸಿಬಿಟ್ಟಳು. ಆಗುವುದಾದರೆ ತಾನು ಗಣಿತಜ್ಞೆಯೇ ಆಗಬೇಕೆಂದು ಆ ಕ್ಷಣವೇ ನಿರ್ಧರಿಸಿಬಿಟ್ಟಳು! ಒಬ್ಬ ವ್ಯಕ್ತಿಯನ್ನು ಸಾವೇ ಬಾಗಿಲಲ್ಲಿ ನಿಂತು ಅಣಕಿಸುವಾಗಲೂ ಅತ್ತ ನೋಡದಂತೆ ಹಿಡಿದುಕೂರಿಸುವ ಶಕ್ತಿ ಗಣಿತಕ್ಕೆ ಇದೆಯಾದರೆ, ಅದು ನಿಜವಾಗಿಯೂ ಅದ್ಭುತ ವಿಷಯವೇ ಆಗಿರಬೇಕು ಎಂದು ಬಾಲಕಿ ತರ್ಕಿಸಿದ್ದಳು! ಮುಂದೆ ತನ್ನ ಸಂಕಲ್ಪಕ್ಕೆ ತಕ್ಕಂತೆ ಎಲ್ಲ ಸಂಕಷ್ಟಗಳನ್ನು ಎದುರಿಸಿಯೂ ಸೊಫೀ ಜಗತ್ತಿನ ಶ್ರೇಷ್ಠ ಗಣಿತಜ್ಞರ ಸಾಲಲ್ಲಿ ನಿಲ್ಲಬಲ್ಲಂತಹ ಕೆಲಸ ಮಾಡಿದಳು.
-ರೋಹಿತ್ ಚಕ್ರತೀರ್ಥ