ಹೊಸದಿಲ್ಲಿ: ಮಿತಿ ಮೀರಿದ ಔಷಧ ಸೇವನೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಕರ್ನಾಟಕ ನಂ.2 ಸ್ಥಾನಪಡೆದು ಕುಖ್ಯಾತಿ ಸಾಧಿಸಿದೆ. 2017-19ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 239 ಮಂದಿ ಸಾವನ್ನಪ್ಪಿದ್ದು, ನಂ.1 ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 338 ಸಾವು ವರದಿಯಾಗಿದೆ. ನಂ.3 ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 236 ಮಂದಿ ಮೃತರಾಗಿದ್ದಾರೆ.
ಒಟ್ಟು 2,300 ಸಾವು: ಈ ಅವಧಿಯಲ್ಲಿ ಇಡೀ ದೇಶಾದ್ಯಂತ ಒಟ್ಟು 2,300 ಮಂದಿ ಮಿತಿ ಮೀರಿದ ಔಷಧ ಸೇವಿಸಿ ಅಸುನೀಗಿದ್ದಾರೆ. ಈ ಪೈಕಿ 30-45 ವರ್ಷದೊಳಗಿನವರೇ ಹೆಚ್ಚು ಅಂದರೆ, 784 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಮಾಹಿತಿ ನೀಡಿದೆ.
ಮಕ್ಕಳೂ ಸಾವು!: 14 ವರ್ಷದೊಳಗಿನ ಮಕ್ಕಳಲ್ಲಿ ಒಟ್ಟು 55 ಪುಟಾಣಿಗಳ ಜೀವಕ್ಕೆ ಓವರ್‌ಡೋಸ್ ಔಷಧ ಕುತ್ತು ತಂದಿದೆ. 14-18 ವರ್ಷದವರ ಪೈಕಿ 7 ಮಕ್ಕಳು ಮೃತರಾಗಿದ್ದಾರೆ.
18-30 ವರ್ಷದೊಳಗಿನವರಲ್ಲಿ 550, 45-60 ವಯಸ್ಸಿನವರ ಪೈಕಿ 550 ಮಂದಿ ಜೀವ ತೆತ್ತಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ.
ಮಿತಿ ಮೀರಿದ ಡ್ರಗ್ಸ್ ಸೇವನೆ ಕೂಡ ಮಾದಕ ವಸ್ತು ನಿಯಂತ್ರಣ ಕಾಯ್ದೆ ಪ್ರಕಾರ, ಅಪರಾಧ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಒಟ್ಟು 272 ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆರೋಗ್ಯ ಇಲಾಖೆ ಜತೆಗೂಡಿ “ನಶಾಮುಕ್ತ ಭಾರತ ಅಭಿಯಾನ (ಎನ್‌ಎಂಬಿಎ)’ ಕೈಗೊಂಡಿದೆ.