“ಡಿಯರ್ ಸತ್ಯ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಪರ್ಪಲ್ ರಾಕ್ ಎಂಟರ್ ಟೈನರ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್‌ನಡಿ ಈ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ಆರ್ಯನ್ ಸಂತೋಷ್ ನಾಯಕರಾಗಿ ನಟಿಸಿದ್ದಾರೆ. ಯತೀಶ್ ವೆಂಕಟೇಶ್, ಬಿ.ಎಸ್. ಶ್ರೀನಿವಾಸ್, ಗಣೇಶ್ ಪಾಪಣ್ಣ ಮತ್ತು ಅಜಯ್ ಅಪ್ಪರೂಪ್ ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಆಕ್ಷನ್ ರಿವೆಂಜ್ ಹಾಗೂ ಥ್ರಿಲ್ಲರ್ ಜಾನರ್‌ಗೆ ಸೇರುತ್ತದೆ. ಶಿವಗಣೇಶ್ ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ಡಿಯರ್ ಸತ್ಯ ಕ್ಲಾಸಿಕ್ ಕಮರ್ಷಿಯಲ್ ಚಿತ್ರವಾಗಲಿದೆ.
ಈಗಾಗಲೇ ತೊಂಭತ್ತು ಭಾಗ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರುತ್ತೇವೆ. ಕೊರೊನಾದಿಂದ ಎದುರಾಗಿರುವ ಚಿತ್ರಮಂದಿರಗಳ ಸಮಸ್ಯೆ ಬಗೆಹರಿದರೆ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ನೇರವಾಗಿ ಓಟಿಟಿಯಲ್ಲೇ ರಿಲೀಸ್ ಮಾಡಬೇಕಾಗುತ್ತದೆ’ ಎನ್ನುತ್ತದೆ ಚಿತ್ರತಂಡ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ಆರ್ಯನ್ ಸಂತೋಷ್, “ಈ ಹಿಂದೆ ನಟಿಸಿದ ಸಿನಿಮಾಗಳಲ್ಲಿ ನನ್ನನ್ನು ನಾನು ನೋಡಿಕೊಳ್ಳುತ್ತಿದೆ. ಆದರೆ ಈ ಸಿನಿಮಾದ ಡಬ್ಬಿಂಗ್ ಮಾಡಬೇಕಾದರೆ ನನಗೆ ಅನ್ನಿಸಿದ್ದು, ಇಲ್ಲಿ ನಾನು ಸತ್ಯನಾಗಿ ಪೂರ್ತಿ ಬದಲಾಗಿದ್ದೇನೆ ಅನ್ನೋದು. ಈ ಚಿತ್ರದಲ್ಲಿ ಸತ್ಯ ಮತ್ತು ರಿವೆಂಜ್ ಸತ್ಯ ಎಂಬ ಎರಡು ಶೇಡ್‌ಗಳಿವೆ. ಒಂದರಲ್ಲಿ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡರೆ ಮತ್ತೂಂದು ಲುಕ್‌ನಲ್ಲಿ ಉದ್ದುದ್ದ ಗಡ್ಡ ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ದೇನೆ. ಆರಂಭದಲ್ಲಿ ಈ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾದವು. ಪರ್ಪಲ್ ರಾಕ್ ಸಂಸ್ಥೆ ಕೈ ಜೋಡಿಸಿದ ಮೇಲೆ ಎಲ್ಲವೂ ಸಲೀಸಾಗಿ ನೆರವೇರಿತು. ಪೊಲೀಸ್ ಪಾತ್ರಕ್ಕೆ ಅತುಲ್ ಕುಲಕರ್ಣಿ ಅವರು ಬರಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆ ಪಾತ್ರವನ್ನು ನಮ್ಮ ಕನ್ನಡದವರೇ ಆದ ಅರವಿಂದ್ ರಾವ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ತಾಯಿ ಮತ್ತು ಮಗನ ಬಾಂಧವ್ಯವಿದೆ’ ಎಂದರು.
ಈ ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ ಜಾಹೀರಾತು, ಕಾರ್ಯಕ್ರಮ ನಿರೂಪಣೆಗಳಲ್ಲಿ ಭಾಗಿಯಾಗುತ್ತಲೇ ಸಿನಿಮಾ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದರಂತೆ. ಹಾಗೆ ಆಡಿಷನ್ ಮೂಲಕ ಡಿಯರ್ ಸತ್ಯ ಚಿತ್ರಕ್ಕೆ ಆಯ್ಕೆಯಾಗಿದ್ದಾಗಿ ಹೇಳಿಕೊಂಡರು.ರಾಕ್‌ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ಕೂಡಾ ಈ ಚಿತ್ರದ ನಿರ್ಮಾಪಕರೊಬ್ಬರಾಗಿದ್ದಾರೆ. ಈ ಸಿನಿಮಾವನ್ನು ಐವತ್ತು ದಿನಗಳ ಕಾಲ್‌ಶೀಟ್‌ನಲ್ಲಿ ಚಿತ್ರೀಕರಿಸಿದ್ದೇವೆ. ಚಿತ್ರದ ಐದು ಹಾಡುಗಳಿಗೆ ಶ್ರೀಧರ್ ವಿ ಸಂಭ್ರಮ್ ಅದ್ಭುತವಾದ ಟ್ಯೂನ್ ನೀಡಿದ್ದಾರೆ. ಇಡೀ ತಂಡದ ಪ್ರೋತ್ಸಾಹದಿಂದ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಕೂಡಾ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸವಿದೆ ಎಂದರು. “ಡಿಯರ್ ಸತ್ಯ’
ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ.
– ರವಿಪ್ರಕಾಶ್ ರೈ