ಫ್ರೆಂಡ್ಸ್ ನಮ್ಮ ಬಾಲ್ಯದ ದಿನಗಳಿಂದ ಹಿಡಿದು ನಮ್ಮ ಜೀವನದ ವಿವಿಧ ಮಗ್ಗಲಲ್ಲಿ ಬಂದು ಹೋಗುವ ಅಮೂಲ್ಯ ರತ್ನಗಳು. ಸ್ನೇಹಿತ ವರ್ಗ ಒಂದು ಇದ್ದರೆ ಎಂಥ ನೋವನ್ನು ಬೇಕಾದರೂ ಹಂಚಿಕೊಳ್ಳಲು ಸಾಧ್ಯ. ಬಾಲ್ಯದ ಮೊದಲ ಮಂಗಾಟ ಶುರುವಾಗುವ ಹಂತ ಅಂಗನವಾಡಿಯಲ್ಲಿ ಸಿಗುವ ಆಕಸ್ಮಿಕ ಗೆಳೆಯನಿಂದ ಹಿಡಿದು, ಹೈಸ್ಕೂಲ್-ಕಾಲೇಜು ಹಂತದಲ್ಲಿ ಸಿಗುವ ಕೆಲವೊಂದು ಟೈಮ್‌ಪಾಸ್ ಗೆಳೆಯರು ಕೂಡ ಸದಾ ನೆನಪಿನಲ್ಲಿ ಉಳಿಯುತ್ತಾರೆ.
ಬಹುಶಃ ನನ್ನಲ್ಲಿ ಅಂಥ ಆತ್ಮೀಯತೆ ಬೆಳೆದದ್ದು ಹೈಸ್ಕೂಲ್‌ನಲ್ಲಿ ಇರಬೇಕು. ಅಂಗನವಾಡಿಯಿಂದ ಪ್ರೈಮರಿಯವರೆಗೆ ಬರೀ ಯಾವಾಗ ಬೆಲ್ ಆಗುತ್ತದೆ ಎನ್ನುವ ಕಡೆಗೆ ಕಿವಿಯನ್ನು ತೆರೆದು ಇಡುತ್ತಿದೆ ವಿನಾ ಪಾಠದ ಕಡೆ ಗಮನ ಹರಿಸಿದ್ದು ಅಪರೂಪ. ಕ್ಲಾಸ್ ಅಲ್ಲಿ ಗೂಬೆ ತರ ಕೂತು ಕತ್ತು ಆಡಿಸುತ್ತ ಆಗಾಗ ಮಾತನಾಡುತ್ತಾ ಇದ್ದೆ. ಬರ್ತ್‌ಡೇ ಬಂದಾಗ ಎಲ್ಲರಿಗೂ ಚಾಕ್ಲೇಟ್ ಕೊಟ್ಟದ್ದು ಒಂದು ಸ್ಪಷ್ಟ ನೆನಪು. ಅಂತೂ ಏಳನೆಯ ಕ್ಲಾಸ್ ದಾಟಿ ಎಂಟನೆಯ ಕ್ಲಾಸಿಗೆ ಬಂದೆ.
ಅದು ಹೈಸ್ಕೂಲ್ ಅರಿಯದ ಮುಖಗಳು. ಮೂಡುವ ಹೊಸ ಕನಸು. ಬೆಂಚ್‌ಗಳ ಜೊತೆ ಡೆಸ್ಕ್ಗಳ ಸಮ್ಮಿಲನ. ಎಲ್ಲರೂ ಒಟ್ಟಿಗೆ ಕೂತು ಪಾಠ ಕೇಳುವ ಸಮಯ. ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ದಿನಗಳು ತಿಂಗಳುಗಳಾಗಿ ಉರುಳಿದವು. ನಿಧಾನವಾಗಿ ಹೈಸ್ಕೂಲ್ ಲೋಕಕ್ಕೆ ತೆರೆದುಕೊಳ್ಳುತ್ತ ಹೋದಂತೆ, ಮನೋಜ ಎಂಬ ಹುಡುಗನ ಪರಿಚಯ ನನಗಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಆತನನ್ನು ನಮ್ಮ ಕನ್ನಡ ಮೇಷ್ಟ್ರು ಶಾಲೆಗೆ ಸೇರಿಸಿದರು. ಮನೋಜನ ಸ್ನೇಹ ಗಟ್ಟಿಯಾಯಿತು. ಎಲ್ಲಿ ಹೋದರೂ ಆತನ ಜೊತೆಗೆ ಹೋಗುತ್ತ ಇದ್ದೆ. ಓದಿನ ವಿಷಯದಲ್ಲಿ ಮನೋಜ ನನಗೆ ಸಮಾನ ಆಗಿದ್ದ. ಕೊಟ್ಟ ಹೋಮ್‌ವರ್ಕ್ ಮಾಡದೇ ಕ್ಲಾಸಿನ ಹೊರಗೆ ಕೂತು ಮಾತನಾಡಿ, ನಾಗರಬೆತ್ತದ ಏಟನ್ನು ಒಟ್ಟಿಗೆ ತಿಂದು ಇನ್ನೊಂದು ದಿನ ಇನ್ನೊಬ್ಬರ ನೋಟ್ಸ್ ಕಾಪಿ ಮಾಡಿ ಹೋಮ್‌ವರ್ಕ್ ಮಾಡಿ ಟೀಚರ್‌ನಿಂದ ಶಹಭಾಸ್ ಗಿರಿಯನ್ನು ಪಡೆದುಕೊಂಡ ಆ ನೆನಪು ಮರೆಮಾಚದೆ ಹಾಗೇ ಉಳಿದಿದೆ.
ಇಡೀ ಶಾಲೆಯಲ್ಲಿ ನಮ್ಮಿಬ್ಬರ ಗೆಳೆತನಕ್ಕೆ ಹೊಗಳಿಕೆಯ ಮಾತುಗಳು ಕೇಳಿ ಬರುತ್ತ ಇತ್ತು. ಕಲಿಕೆಯಲ್ಲಿ ಅಷ್ಟಕ್ಕೇ ಅಷ್ಟೇ ಎನ್ನುವಷ್ಟು ಹಿಂದಕ್ಕೆ ಉಳಿದಿದ್ದೆವು. ಮನೋಜ ಶಾಲೆಗೆ ಬರುವುದು ಕಡಿಮೆಯಾಯಿತು. ಕಾರಣ ಆತ ತನ್ನ ಅಣ್ಣನೊಂದಿಗೆ ಆಗಾಗ ಕೆಲಸಕ್ಕೆ ಹೋಗುತ್ತಿದ್ದ. ಕೃಷಿಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ ಅವನ ಕೈಗಳು ಒಗ್ಗಿಕೊಂಡೇ ಬಂದು ಇದ್ದವು. ಇತ್ತ ನಮ್ಮ ಒಂಬತ್ತನೇ ಕ್ಲಾಸಿನ ವಾರ್ಷಿಕ ಫಲಿತಾಂಶ ಪ್ರಕಟವಾಯಿತು. ನಿರೀಕ್ಷೆಯಂತೆಯೇ ನಾನು ಮತ್ತು ಮನೋಜ ಒಟ್ಟೊಟ್ಟಿಗೆ ಫೇಲ್ ಆಗಿದ್ದೀವಿ. ಮನೋಜ ಮಾತ್ರ ಇನ್ನೊಂದು ಸಲ ಶಾಲೆಯ ಕಡೆ ಮುಖ ತೋರಿಸಲೇ ಇಲ್ಲ.
ಅಣ್ಣನ ಜೊತೆಗೆ ಕೆಲಸವನ್ನು ಮಾಡುತ್ತ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ.ಈಗ ಮನೋಜ ನನ್ನಷ್ಟು ಕಲಿಯದೇ ಇದ್ದರೂ ನನ್ನಗಿಂತ ಜಾಸ್ತಿ ಸಂಪಾದಿಸುತ್ತ ಇದ್ದಾನೆ. ರಜೆಯ ಸಮಯದಲ್ಲಿ ಚಂಡೆ ನುಡಿಸಲು ಹೋಗುವ ಮನೋಜ ಉಳಿದ ಹೊತ್ತಿನಲ್ಲಿ ಮೇಸಿŒ ಕೆಲಸಕ್ಕೆ ಹೋಗುತ್ತ ಇದ್ದಾನೆ. ಅಪರೂಪಕ್ಕೊಮ್ಮೆ ಭೇಟಿಯಾದರೂ ಆತ್ಮೀಯವಾಗಿ ಮಾತನಾಡದೇ ಹೋಗಲ್ಲ !
ಮಿಸ್ ಯೂ ಫ್ರೆಂಡ್!
– ಸುಹಾನ್