Advertisement
ಪಂಜಾಬಿನ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಸರಕಾರದ ಸಚಿವ ಸಂಪುಟ ಸಭೆ ಭಾರತೀಯ ದಂಡ ಸಂಹಿತೆಯಲ್ಲಿರುವ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವವರನ್ನು ಶಿಕ್ಷಿಸುವ ನಿಯಮಕ್ಕೆ ಹೊಸದೊಂದು ತಿದ್ದುಪಡಿ ತರಲು ಅನುಮತಿಸಿದೆ. ವಿವಿಧ ಧರ್ಮಗಳ ಧಾರ್ಮಿಕ ಗ್ರಂಥಗಳಾದ ಗುರುಗ್ರಂಥ ಸಾಹಿಬ್, ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಗ್ರಂಥಗಳಿಗೆ ಯಾರಾದರೂ ಹಾನಿ ಮಾಡಿದರೆ ಅಥವಾ ಅಪಚಾರ ಎಸಗಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಈ ತಿದ್ದುಪಡಿಯ ಉದ್ದೇಶ.
Related Articles
Advertisement
ದೇಶದಲ್ಲಿ ಧಾರ್ಮಿಕ ಅವಹೇಳನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಸೋಷಿಯಲ್ ಮೀಡಿಯಾ ಜನಪ್ರಿಯಗೊಂಡ ಬಳಿಕ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಧರ್ಮ ನಿಂದನೆಯ ಸುಳ್ಳು ಪ್ರಕರಣಗಳು ಕೂಡಾ ದಾಖಲಾಗುತ್ತಿರುತ್ತವೆ. ಯಾರನ್ನಾದರೂ ಸಿಕ್ಕಿಸಿ ಹಾಕಬೇಕೆಂದು ಉದ್ದೇಶಪೂರ್ವಕವಾಗಿ ಧರ್ಮ ನಿಂದನೆ ಕೇಸು ದಾಖಲಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಕಾನೂನು ದುರುಪಯೋಗವಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ಧರ್ಮಕ್ಕೆ ಅಪಚಾರ ಎಸಗುವವರನ್ನು ಶಿಕ್ಷಿಸಲು ಈಗಾಗಲೇ ಕಠಿನ ಕಾನೂನು ಇರುವಾಗ ಅಮರೀಂದರ್ ಸರಕಾರ ಹೊಸದಾಗಿ ಕಾನೂನು ರಚಿಸುವ ಅಗತ್ಯವಿರಲಿಲ್ಲ.
ಕಾನೂನು ಈಗಿರುವ ಸ್ವರೂಪದಲ್ಲಿ ಜಾರಿಯಾದರೆ ಪಾಕಿಸ್ಥಾನದ ಧರ್ಮನಿಂದನೆ ಕಾನೂನಿನಂತಾಗಲಿದೆ ಎಂಬ ಟೀಕೆಗಳಲ್ಲಿ ಹುರುಳಿದೆ. ಪಾಕಿನಲ್ಲಿ ಧಾರ್ಮಿಕ ಗ್ರಂಥಕ್ಕೆ ಅಪಚಾರ ಎಸಗಿದರೆ ಗಲ್ಲಿಗೇರಿಸುವ, ಅನೇಕ ವರ್ಷಗಳ ತನಕ ಜೈಲಿಗೆ ತಳ್ಳುವ ಕಾನೂನು ಇದೆ. ಮೂಲಭೂತವಾದಿಗಳು ಧರ್ಮ ನಿಂದೆ ಮಾಡಿದ ಆರೋಪಕ್ಕೊಳಗಾಗಿರುವವರನ್ನು ಗುಂಡಿಕ್ಕಿ ಸಾಯಿಸಿದ ಪ್ರಕರಣಗಳು ಸಂಭವಿಸಿವೆ. ಸಚಿವರೇ ಅಲ್ಲಿ ಧರ್ಮ ನಿಂದನೆ ಆರೋಪದಲ್ಲಿ ಮೂಲಭೂತವಾದಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಸರಕಾರ ಎಲ್ಲ ಧರ್ಮಗಳಿಂದಲೂ ಸಮಾನ ಅಂತರ ಕಾಯ್ದುಕೊಳ್ಳಬೇಕೆನ್ನುವುದು ಜಾತ್ಯಾತೀತ ತತ್ವದ ಮೂಲ ಆಶಯ. ಅದನ್ನು ಇನ್ನಷ್ಟು ಬಲಗೊಳಿಸುವತ್ತ ಪ್ರಯತ್ನಿಸಬೇಕು. ಅಂಥ ರಚನಾತ್ಮಕ ನೆಲೆಯತ್ತ ಸಾಗುವುದು ಅತ್ಯವಶ್ಯ.