Advertisement

ಪೊಲಿಯೋ ಪೀಡಿತ ಮಗು ಕೊಲೆಗೆ ಸುಪಾರಿ

02:29 PM Jul 19, 2019 | Team Udayavani |

ಬೆಂಗಳೂರು: ಐದು ವರ್ಷದ ಪೊಲಿಯೋ ಪೀಡಿತ ಮಗುವನ್ನು ಕೊಲೆ ಮಾಡಲು ತಂದೆಯೊಬ್ಬ ರೌಡಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ ಆಘಾತಕಾರಿ ಸಂಗತಿ ಬಯಲಾಗಿದೆ.

Advertisement

ಮಗು ಕಾಣೆಯಾದ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಬೆನ್ನತ್ತಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಮಗುವನ್ನು ಕೊಲ್ಲಿಸಿದ ತಂದೆ ಹಾಗೂ ಐವತ್ತು ಸಾವಿರ ರೂ. ಹಣದ ಆಸೆಗೆ ಮಗುವನ್ನು ಕತ್ತು ಹಿಸುಕಿ ಕೊಂದ ರೌಡಿ ಶೀಟರ್‌ನನ್ನು ಬಂಧಿಸಿದ್ದಾರೆ. ರೌಡಿ ಶೀಟರ್‌ ಮಹೇಶ್‌ ಹಾಗೂ ಜಯಪ್ಪ ಬಂಧಿತರು.

ದಾವಣಗೆರೆ ಮೂಲದ ಜಯಪ್ಪ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಈ ಪೈಕಿ ಮೂರನೆಯ ಮಗು ಬಸವರಾಜು (5) ಪೊಲಿಯೋ ಪೀಡಿತವಾಗಿದ್ದು, ಮೂರ್ಛೆರೋಗದಿಂದ ಬಳಲುತ್ತಿತ್ತು. ಜಯಪ್ಪ ದಂಪತಿ ರಾಜಾಜಿನಗರದಲ್ಲಿ ಶೆಡ್‌ ಹಾಕಿಕೊಂಡು ವಾಸಿಸುತ್ತಿದ್ದಾರೆ. ಜಯಪ್ಪ ಗಾರೆ ಕೆಲಸ ಮಾಡಿಕೊಂಡಿದ್ದ.

ಎರಡು ತಿಂಗಳ ಹಿಂದೆ ಜಯಪ್ಪನಿಗೆ ಆಟೋ ಚಾಲಕನಾಗಿರುವ ರೌಡಿ ಶೀಟರ್‌ ಮಹೇಶನ ಪರಿಚಯವಾಗಿತ್ತು. ಕಾಲ ಕ್ರಮೇಣ ಇಬ್ಬರೂ ಆತ್ಮೀಯರಾಗಿದ್ದರು. ಈ ಸಂದರ್ಭದಲ್ಲಿ ಜಯಪ್ಪ, ತನಗಿರುವ ನಾಲ್ವರು ಮಕ್ಕಳ ಪೈಕಿ ಬಸವರಾಜು ವಿಶೇಷ ಚೇತನ (ಅಂಗವೈಕಲ್ಯ) ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದಾನೆ. ಆತನಿಗೆ ನಿಮ್ಹಾನ್ಸ್‌ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಕೊಡಿಸಲು ಹಣವಿಲ್ಲ ಎಂದು ನೋವು ತೋಡಿಕೊಂಡಿದ್ದ.

ಐವತ್ತು ಸಾವಿರ ರೂ.ಗೆ ಬೇಡಿಕೆ: ಜಯಪ್ಪ ಮಗುವಿನ ಬಗ್ಗೆ ಹೇಳಿದ್ದನ್ನು ಕೇಳಿದ ಮಹೇಶ್‌, ಮಗುವಿಗೆ ಚಿಕಿತ್ಸೆ ಕೊಡಿಸಿ ಹಣ ಕಳೆದುಕೊಳ್ಳುವ ಬದಲು ಐವತ್ತು ಸಾವಿ ರೂ. ನೀಡಿದರೆ ವಿಷದ ಇಂಜೆಕ್ಷನ್‌ ನೀಡಿ ಸಾಯಿಸುತ್ತೇನೆ ಎಂದು ತಿಳಿಸಿದ್ದ. ಇದಕ್ಕೆ ಜಯಪ್ಪ ಕೂಡ ಒಪ್ಪಿಗೆ ಸೂಚಿಸಿ ಅಡ್ವಾನ್ಸ್‌ ರೂಪದಲ್ಲಿ ಐದು ಸಾವಿರ ರೂ. ನೀಡಿದ್ದ.

Advertisement

ಸಿಕ್ಕಿಬಿದ್ದಿದ್ದು ಹೇಗೆ?: ವಿಶೇಷ ಚೇತನ ಮಗು ಬಸವರಾಜು, ಹಲವು ದಿನಗಳಿಂದ ಹೊರಗೆ ಬಾರದಿರುವು ದನ್ನು ಗಮನಿಸಿದ ಅಕ್ಕ-ಪಕ್ಕದ ಮನೆಯವರು, ಮಗುವಿಗೆ ಏನಾಗಿದೆ ಎಂದು ಜಯಪ್ಪ ದಂಪತಿಗೆ ಕೇಳಿದಾಗ ಸಂಬಂಧಿಕರ ಜತೆ ಊರಿಗೆ ಕಳುಹಿಸಿದ್ದೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳುತ್ತಿದ್ದರು.

ಈ ಬೆನ್ನಲ್ಲೇ ಅಪರಿಚಿತ ವ್ಯಕ್ತಿಯೊಬ್ಬರು ಮಗು ನಾಪತ್ತೆಯಾಗಿದ್ದರ ಕುರಿತು ಸಿಸಿಬಿಗೆ ಮಾಹಿತಿ ನೀಡಿದ್ದರು. ಜತೆಗೆ ಜಯಪ್ಪ ಹಾಗೂ ಮಹೇಶನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಮಹೇಶನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಗು ಬಸವರಾಜುನನ್ನು ತಾನೇ ಕೊಂದಿರುವುದಾಗಿ ಬಾಯ್ಬಿಟ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಆರೋಪಿಗಳು ಮಗು ಕೊಂದ ಬಗ್ಗೆ ತಪ್ಪೊಪ್ಪಿಕೊಂಡಿ ದ್ದಾರೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ನಂದಿನಿ ಲೇಔಟ್ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಕತ್ತು ಹಿಸುಕಿ ಕೊಂದ: ಒಂದೂವರೆ ತಿಂಗಳ ಹಿಂದೆ ಮಧ್ಯಾಹ್ನದ ವೇಳೆ ಮಹೇಶ್‌ ಹಾಗೂ ಜಯಪ್ಪ ಶೆಡ್‌ಗೆ ಹೋಗಿ, ಪತ್ನಿ ಹಾಗೂ ಉಳಿದ ಮಕ್ಕಳನ್ನು ಹೊರಗಡೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಮಹೇಶ್‌ ಮಗು ಬಸವರಾಜುವಿನ ಕತ್ತು ಹಿಸುಕಿ ಕೊಲೆಗೈದಿದ್ದ. ಇದಾದ ಬಳಿಕ ಜಯಪ್ಪ, ಗೊರಗುಂಟೆಪಾಳ್ಯದ ಸ್ಮಶಾನದಲ್ಲಿ ಮಗುವಿನ ಮೃತದೇಹದ ಅಂತಿಮ ಸಂಸ್ಕಾರ ಮಾಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next