Advertisement

ಸೆನ್ಸಾರ್‌ನಲ್ಲಿ “ಡೆಡ್ಲಿ’ಪಾಸ್‌

10:10 AM Feb 02, 2020 | Lakshmi GovindaRaj |

ರೊಮ್ಯಾಂಟಿಕ್‌ ಕಂ ಕ್ರೈಂ-ಥ್ರಿಲ್ಲರ್‌ ಚಿತ್ರಗಳ ಮೂಲಕ ಬಾಲಿವುಡ್‌ನ‌ಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಮಹೇಶ್‌ ಭಟ್‌ ಬಗ್ಗೆ ಸಿನಿಮಂದಿಗೆ ಗೊತ್ತೇ ಇದೆ. ಈಗ ಇದೇ ಮಹೇಶ್‌ ಭಟ್‌ ಅವರ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸ್ಯಾಂಡಲ್‌ವುಡ್‌ನ‌ಲ್ಲಿಯೂ ಅಂಥದ್ದೇ ಚಿತ್ರವೊಂದನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕ ರಾಜೇಶ್‌ ಮೂರ್ತಿ. ಅಂದಹಾಗೆ, ಆ ಚಿತ್ರದ ಹೆಸರು “ಡೆಡ್ಲಿ ಅಫೇರ್‌’. ಚಿತ್ರದ ಹೆಸರೇ ಹೇಳುವಂತೆ ಇದು ಲವ್‌, ಕ್ರೈಂ ಮತ್ತು ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬಂದಿರುವ ಚಿತ್ರ.

Advertisement

ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್‌ ಮಂಡಳಿ “ಎ’ ಸರ್ಟಿಫಿಕೆಟ್‌ ಕೊಟ್ಟು, ಬಿಡುಗಡೆಗೆ ಅಸ್ತು ಎಂದಿದೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಜೇಶ್‌ ಮೂರ್ತಿ, “ನನ್ನ ಸಿನಿಮಾಗಳಲ್ಲಿ ಬಾಲಿವುಡ್‌ ಖ್ಯಾತ ನಿರ್ದೇಶಕ ಮಹೇಶ್‌ಭಟ್‌ರವರ ಸಿನಿಮಾಗಳ ಛಾಯೆ ಎದ್ದು ಕಾಣುತ್ತದೆ. ಗ್ಲಾಮರ್‌ ಇಟ್ಟುಕೊಂಡು ಕಥೆ ಹೇಳುವ ಅವರ ಶೈಲಿಯಲ್ಲೇ ಕನ್ನಡದಲ್ಲೂ ಏಕೆ ಇಂತಹ ಪ್ರಯತ್ನ ಮಾಡಬಾರದು ಎಂದು ನನಗನಿಸಿತು.

ಅಂತಹ ಪ್ರಯೋಗದಲ್ಲಿ ಈಗ “ಡೆಡ್ಲಿ ಅಫೇರ್‌’ ಸಿನಿಮಾ ಮಾಡಿದ್ದೇನೆ. ವಿವಾಹೇತರ ಸಂಬಂಧಗಳ ಕುರಿತು ಕೆಡುಕುಗಳನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಗಂಡಸರ ಒಳ್ಳೆಯತನವನ್ನು ಈಗಿನ ಹುಡುಗಿಯರು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದು ಈ ಚಿತ್ರದಲ್ಲಿದೆ. ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡಬೇಕು’ ಎನ್ನುತ್ತಾರೆ.

ಇನ್ನು ರಾಜೇಶ್‌ ಮೂರ್ತಿಯವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ “ಡೆಡ್ಲಿ ಅಫೇರ್‌’ ಚಿತ್ರದಲ್ಲಿ ಗುಂಜನ್‌ ಅರಸ್‌ ನಾಯಕಿಯಾಗಿ, ಸ್ವಪನ್‌ ಕೃಷ್ಣ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಹುಲ್‌ ಸೋಮಣ್ಣ, ಮಾಸ್ಟರ್‌ ಮಿಶ್ರುತ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಶನ್‌ ಕಾರ್ಯಕ್ಕೆ ಚಾಲನೆ ನೀಡಿರುವ “ಡೆಡ್ಲಿ ಅಫೇರ್‌’ ಚಿತ್ರವನ್ನು ಫೆಬ್ರವರಿ ವೇಳೆಗೆ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next