ಬೆಂಗಳೂರು: ಬಿಬಿಎಂಪಿಯು ಓಕಳಿಪುರ ಬಳಿ ನಿರ್ಮಿಸುತ್ತಿರುವ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್‌ನ ನಾಲ್ಕು ಪಥದ ರಸ್ತೆ ಮಾರ್ಚ್ ವೇಳೆ ಹಾಗೂ ಮೇ ವೇಳೆಗೆ ಎಲ್ಲಾ ಎಂಟೂ ಪಥದ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮೇಯರ್ ಜಿ. ಪದ್ಮಾವತಿ ಆದೇಶಿಸಿದ್ದಾರೆ.
4 ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಶಂಕುಸ್ಥಾಪನೆಯಾದರೂ ಕಾಮಗಾ ರಿಯ ನಿಧಾನಗತಿಯಿಂದಾಗಿ ಸಾರ್ವಜನಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮೇಯರ್ ಜಿ. ಪದ್ಮಾವತಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಾಮಗಾರಿ ವಿಳಂಬದಿಂದಾಗಿ ತೀವ್ರ ತೊಂದರೆ ಎದುರಿಸುತ್ತಿರುವುದಾಗಿ ಸಾರ್ವಜನಿಕರು ದೂರುತ್ತಿ ದ್ದಾರೆ. ಎಂಟುಪಥದ ರಸ್ತೆ ಕಾಮಗಾರಿಯಲ್ಲಿ ಮಾರ್ಚ್ ಒಳಗಾಗಿ ನಾಲ್ಕು ಪಥದ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಕಾಮಗಾರಿಗೆ ಚುರುಕು ನೀಡಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಗುತ್ತಿಗೆದಾರರು ಕಾಮಗಾರಿ ಮುಗಿಯಲು ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ಮೇಯರ್, ಆರು ತಿಂಗಳಲ್ಲಿ ಪೂರ್ಣ ಯೋಜನೆ ಪೂರ್ಣಗೊಳ್ಳಬೇಕು. ಈ ಜಂಕ್ಷನ್‌ನಲ್ಲಿ ಅತಿ ಹೆಚ್ಚು ವಾಹನ ಸಂಚಾರ ವಿರುವುದರಿಂದ ದಟ್ಟಣೆ ಉಂಟಾಗದಂತೆ ಫೆಬ್ರವರಿ ವೇಳೆಗೆ ಕನಿಷ್ಠ 4 ಪಥದ ರಸ್ತೆ ಪೂರ್ಣಗೊಳ್ಳಬೇಕು.
ಜತೆಗೆ ಮಾರ್ಚ್ ಒಳಗಾಗಿ ಈ ನಾಲ್ಕು ಪಥದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಮೇ ತಿಂಗಳ ವೇಳೆ ಎಲ್ಲಾ ಎಂಟೂ ಪಥದ ರಸ್ತೆ ಪೂರ್ಣಗೊಳ್ಳಬೇಕು. ಇದಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೆ ಸಿದ್ಧವಾಗಿದ್ದೇವೆ ಎಂದು ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ. ಪದ್ಮಾವತಿ, ಓಕಳಿಪುರಂ ಜಂಕ್ಷನ್ ನಗರ ಹೃದಯ ಭಾಗದಲ್ಲಿದ್ದು ಮೆಜೆಸ್ಟಿಕ್ ಬಸ್ಸು ನಿಲ್ದಾಣ, ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಿದೆ.
ಜತೆಗೆ ರಾಜಾಜಿನಗರ, ಮಲ್ಲೇಶ್ವರ ಹಾಗೂ ಜಯನಗರದಂತಹ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವು ದರಿಂದ ಇಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಜನರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ನೀಡಲು ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಲಿದ್ದೇವೆ ಎಂದು ಹೇಳಿದರು.
ಸಚಿವರು ಹೇಳುವುದೇ ಬೇರೆ
ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಪ್ರಶ್ನಿಸಿದರೆ, ಓಕಳಿಪುರ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಯನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ.
ಈಗಾಗಲೇ ಕಾಮಗಾರಿ ವೇಗವಾಗಿ ಪ್ರಗತಿಯಲ್ಲಿದ್ದು ಡಿಸೆಂಬರ್ ವೇಳೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದ್ದಾರೆ. ಮೇಯರ್ ಮೇ ಒಳಗಾಗಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದರೆ ಜಾರ್ಜ್ ಅವರು ಡಿಸೆಂಬರ್‌ಗೆ ಮುಕ್ತವಾಗಲಿದೆ ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.