ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ನ.10ರ ಒಳಗಾಗಿ ಮುಚ್ಚಲಾಗುವುದು ಎಂದು ಹೇಳಿದ್ದ ಬಿಬಿಎಂಪಿ, ಭರವಸೆ ನೀಡಿದಂತೆ ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲವಾಗಿದೆ.
ನಗರದಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಅ.22 ರಂದು ಸಭೆ ನಡೆಸಿದ ಮೇಯರ್ ಗೌತಮ್ ಕುಮಾರ್ ನ.10ರೊಳಗೆ ನಗರದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದಾಗಿ ಮತ್ತು ಯಾವುದೇ ಕಾರಣಕ್ಕೂ ಈ ಬಾರಿ ಡೆಡ್‌ಲೈನ್ ಮಿಸ್ ಆಗುವುದಿಲ್ಲ ಎಂದೂ ಭರವಸೆ ನೀಡಿದ್ದರು. ಆದರೆ, ಈಗ ಬಿಬಿಎಂಪಿಯ ಅಧಿಕೃತ ಮಾಹಿತಿಯ ಪ್ರಕಾರ ಇನ್ನೂ 1,337 ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ.
ಗುಂಡಿ ಭರ್ತಿ ಸಂಬಂಧಿಸಿದಂತೆ ಪ್ರತಿದಿನ ಯೋಜನಾ ವಿಭಾಗದ ವಿಶೇಷ ಆಯುಕ್ತರು ಸಭೆ ನಡೆಸಬೇಕೆಂದೂ ಮೇಯರ್ ಆದೇಶ ಮಾಡಿದ್ದರು. ಆದರೆ, ಮೇಯರ್ ಆದೇಶದಂತೆ ಯಾವುದೇ ಸಭೆ ನಡೆದಿಲ್ಲ. ಪ್ರತಿದಿನ ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ಮಾಹಿತಿ ನೀಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈ ಪ್ರಕ್ರಿಯೆ ಸಹ ನಿರಂತರವಾಗಿ ನಡೆಯುತ್ತಿಲ್ಲ. ಅ.2ರ ನಂತರ ಖುದ್ದು ರಸ್ತೆ ಗುಂಡಿಗಳ ಪರಿಶೀಲನೆ ನಡೆಸಲಾಗುವುದು ಎಂದಿದ್ದ ಮೇಯರ್, ನ.6 ಒಂದು ದಿನ ಹೊರತು ಪಡಿಸಿದರೆ, ಉಳಿದ ದಿನ ರಸ್ತೆ ಗುಂಡಿ ಪರಿಶೀಲನೆ ನಡೆಸಲಿಲ್ಲ. ಇದು ಅಧಿಕಾರಿಗಳಿಗಳು ರಸ್ತೆ ಗುಂಡಿ ಮುಚ್ಚಲು ಹಿಂದೇಟು ಹಾಕುವುದಕ್ಕೆ ಕಾರಣವಾಯಿತು. ಈ ವರ್ಷ ಮಳೆಗಾಲ ಮುಕ್ತಾಯವಾಗುವುದಕ್ಕೆ ಮುನ್ನ ಮುಖ್ಯರಸ್ತೆ ಗುಂಡಿ ಮುಚ್ಚುವುದಕ್ಕೆ ಮತ್ತು ವಾರ್ಡ್ ರಸ್ತೆ ಗುಂಡಿ ಮುಚ್ಚುವುದಕ್ಕೆ ಪ್ರತ್ಯೇಕವಾಗಿ ಹಣ ಮೀಸಲಿಟ್ಟು ಟೆಂಡರ್ ನೀಡಲಾಗಿದೆ.
ಇಷ್ಟಾದರೂ ನಗರದ ರಸ್ತೆಗಳು ಗುಂಡಿ ಮುಕ್ತವಾಗಲಿಲ್ಲ. ಮೇಯರ್ ಪತ್ರ ವ್ಯವಹಾರವೂ ಫಲ ನೀಡಲಿಲ್ಲ: ಬೆಂಗಳೂರಿನ ಎಲ್ಲ ಶಾಸಕರಿಗೂ ಪತ್ರ ಬರೆದಿದ್ದ ಮೇಯರ್ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಆದರೆ, ಮೇಯರ್ ಪತ್ರಕ್ಕೆ ಯಾವುದೇ ಶಾಸಕರು ಅಧಿಕೃತವಾಗಿ ಬೆಂಬಲ ಸೂಚಿಸಿ ರಸ್ತೆಗಿಳಿದು ರಸ್ತೆ
ಗುಂಡಿ ಮುಚ್ಚುವುದಕ್ಕೆ ಮುಂದಾಗಲಿಲ್ಲ. 9 ಸಾವಿರ ಗುಂಡಿಗಳಿಗೆ ಮುಕ್ತಿ ಅ.1ರಿಂದ ನ.8ರವರೆಗೆ 10,656 ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಇವುಗಳಲ್ಲಿ 9,319 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು 1,337 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ ಎಂದು ಬಿಬಿಎಂಪಿಯ ಆಯುಕ್ತರಾದ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ವಲಯ ಒಟ್ಟು ರಸ್ತೆ ಗುಂಡಿಗಳು ಮುಚ್ಚಿರುವುದು ಬಾಕಿ ಪೂರ್ವ 1063 986 77 ಪಶ್ಚಿಮ 2688 2367 321ದಕ್ಷಿಣ 1476 1343 133 ಬೊಮ್ಮನಹಳ್ಳಿ 2079 1800 279 ದಾಸರಹಳ್ಳಿ 496 422 74 ಯಲಹಂಕ 720 643 86 ಮಹದೇವಪುರ 1742 1535 207 ರಾಜರಾಜೇಶ್ವರಿ ನಗರ 392 232 160 ಒಟ್ಟು 10,656 9,319 1,337 ಬಿಬಿಎಂಪಿಯ ಮುಂದಿನ ನಡೆ ಏನು? ನ.10ರ ನಂತರ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗುವ ಎಂಜಿನಿಯರ್‌ಗಳ ಅಮಾನತು ಹಾಗೂ ನಿರ್ಲಕ್ಷ್ಯ ಧೋರಣೆ ಅನುಸರಿಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಮೇಯರ್ ಎಂ. ಗೌತಮ್ ಕುಮಾರ್ ಹೇಳಿದ್ದರು. ಆದರೆ, ಈಗ ಈ ಬಗ್ಗೆ ಮೇಯರ್ ಸ್ಪಷ್ಟ ನಿಲುವು ತಾಳದೆ ಇರುವುದು ಅಧಿಕಾರಿಗಳಿಗೆ ಶಿಕ್ಷೆಯಾಗುವ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಅನುಮಾನ ಎನ್ನಲಾಗಿದೆ.