ಔರಾಯ: ಇಲ್ಲಿನ ದೇವಾಲಯವೊಂದರಲ್ಲಿ ಬುಧವಾರ ಇಬ್ಬರು ಸಾಧುಗಳನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಘಟನೆಯ ಬಳಿಕ ಹಿಂಸಾಚಾರ ಭುಗಿಲೆದ್ದಿದೆ.
ಗೋಹತ್ಯೆ ವಿರೋಧಿಸಿದ ಕಾರಣಕ್ಕಾಗಿ ಸಾಧುಗಳ ಹತ್ಯೆ ನಡೆದಿದೆ ಎನ್ನಲಾಗಿದ್ದು, ದುಷ್ಕರ್ಮಿಗಳ ದಾಳಿಯಲ್ಲಿ ಇನ್ನೋರ್ವ ಸಾಧು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ಯೆಗೀಡಾದ ಸಾಧುಗಳು ಲಜ್ಜಾ ರಾಮ್ (65), ಹಲ್ಕೆ ರಾಮ್ (53)ಎಂದು ಗುರುತಿಸಲಾಗಿದೆ.
ಸಾಧುಗಳ ಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ನೂರಾರು ಜನರು ಬೀದಿಗಿಳಿದು ಆಕ್ರೋಶ ಹೊರ ಹಾಕಿದ್ದು, ಅಂಗಡಿ ಮುಂಗಟ್ಟುಗಳು, ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರವನ್ನು ನಡೆಸಿದ್ದಾರೆ.
ಔರಾಯದಲ್ಲಿ ವ್ಯಾಪಕ ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಧುಗಳನ್ನು ಹತ್ಯೆಗೈದ ದುಷ್ಕರ್ಮಿಗಳ ಬಂಧನಕ್ಕೆ ಭಾನುವಾರದ ಗಡುವು ವಿಧಿಸಿದ್ದಾರೆ.
12 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು , ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.