Advertisement

11 ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಸಲು ಗಡುವು

06:23 PM Feb 13, 2021 | Nagendra Trasi |

ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ ಜನರ ಬಹು ವರ್ಷಗಳ ಕನಸಾಗಿರುವ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆಗೆ ದೊರೆಯಲಿದೆ. ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರ ನಿರಂತ ಪ್ರಯತ್ನದ ಫಲವಾಗಿ ವಿಮಾನ ನಿಲ್ದಾಣ ಯೋಜನೆ ಮೊದಲ ಹಂತದಲ್ಲಿ 95 ಕೋಟಿ ರೂ. ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಫೆ. 15ರಂದು ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌. ಎಸ್‌. ಪಾಟೀಲ ಕೂಚಬಾಳ, ವಿಜಯಪುರ ತಾಲೂಕಿನ ಮದಭಾವಿ, ಬುರಣಾಪುರ ಗ್ರಾಮಗಳ ಮಧ್ಯೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸರ್ಕಾರ ಕೆಐಎಡಿಬಿ ಮೂಲಕ 2008 ರಲ್ಲೇ 727 ಎಕರೆ ಜಮೀನು ಭೂಸ್ವಾ ಧೀನ ಮಾಡಿಕೊಂಡಿದೆ. ಈ ಸ್ಥಳದಲ್ಲೇ ಫೆ. 15ರಂದು ಬೆಳಗ್ಗೆ 11 ಗಂಟೆಗೆ ವಿಮಾನ ನಿಲ್ದಾಣ ಯೋಜನೆ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.

ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣ ಯೋಜನೆಯ ವೆಚ್ಚ 220 ಕೋಟಿ ರೂ. ಇದ್ದು, ಮೊದಲ ಹಂತದಲ್ಲಿ 95 ಕೋಟಿ ರೂ. ಕಾಮಗಾರಿ ಆರಂಭಿಸಲಾಗುತ್ತದೆ. ವಿಜಯಪುರ ಜಿಲ್ಲೆಯ ಆಲೂರ ಕನಸ್ಟ್ರಕ್ಷನ್‌ ಸಂಸ್ಥೆಯ ಜೊತೆ ಜ. 4ರಂದೇ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. 11 ತಿಂಗಳಲ್ಲಿ ಕಾಮಗಾರಿ ಮುಗಿಸುವ ಷರತ್ತಿನೊಂದಿಗೆ ಸರ್ಕಾರ ಗುತ್ತಿಗೆ ನೀಡಿದೆ. ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳಲು ಕೆಎಸ್‌ ಐಐಡಿಸಿ ಸಂಸ್ಥೆಯನ್ನು ನೋಡಲ್‌ ಸಂಸ್ಥೆಯಾಗಿ ನೇಮಿಸಿದೆ. ಇದರೊಂದಿಗೆ ಅಖಂಡ ಜಿಲ್ಲೆಯ ಜನರ ವಿಮಾನ ನಿಲ್ದಾಣ ಯೋಜನೆಯ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂದು ವಿವರಿಸಿದರು.

ವಿಮಾನ ನಿಲ್ದಾಣ ಯೋಜನೆ ಪೂರ್ಣಗೊಳ್ಳುವುದರಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ, ಲಿಂಬೆ, ದಾಳಿಂಬೆಯಂತ ತೋಟಗಾರಿಕೆ ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆ ಕಲ್ಪಿಸಲು ಅವಕಾಶ ಸಿಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಮೃದ್ಧ ಅವಕಾಶಗಳನ್ನು ತೆರೆಯಲು ಸಹಕಾರಿ ಆಗಲಿದೆ. ಕೈಗಾರಿಕೆ ಸ್ಥಾಪಿಸಲು ಉದ್ಯಮಪತಿಗಳಿಗೆ ಪ್ರಯಾಣ ಸುಲಭವಾಗಲಿದೆ. ನೀರಾವರಿ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ
ಅನುಷ್ಠಾನಗೊಳ್ಳುತ್ತಿದ್ದು ಕೃಷಿ, ತೋಟಗಾರಿಕೆ, ಕೈಗಾರಿಕೆ ಕ್ರಾಂತಿಗೆ ವಿಮಾನ ನಿಲ್ದಾಣ ಯೋಜನೆ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಆಗಲಿದೆ ಎಂದು ವಿವರ ನೀಡಿದರು.

ದಶಕದ ಹಿಂದೆ ಯಡಿಯೂರಪ್ಪ ಅವರೇ ಅಡಿಗಲ್ಲು ಹಾಕಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗ ನಂತರ ಬಂದ ಸರ್ಕಾರಗಳು ಆಸಕ್ತಿ ತೋರಲಿಲ್ಲ. ಪರಿಣಾಮ ಯೋಜನೆಗೆ ನೆನೆಗುದಿಗೆ ಬಿದ್ದಿತ್ತು. ಇದೀಗ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ವಿಜಯಪುರ ಸಂಸದರಾದ ರಮೇಶ ಜಿಗಜಿಣಗಿ ಅವರ ರಾಜಕೀಯ ಇಚ್ಛಾಶಕ್ತಿಯಿಂದ ಯೋಜನೆಗೆ ಚಾಲನೆ ಸಿಗುತ್ತಿದೆ. ಇದಕ್ಕಾಗಿ ಜಿಲ್ಲೆಯ ಜನತೆಯ ಪರವಾಗಿ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಇದಕ್ಕೆ ಸಹಕರಿಸಿದ ಎಲ್ಲರೂ ಭಿನಂದನಾರ್ಹರು ಎಂದರು. ಮುಖ್ಯಮಂತ್ರಿಗಳು ರಾಜ್ಯದ ಬಜೆಟ್‌ ಸಿದ್ಧತೆಯಲ್ಲಿ ತೊಡಗಿರುವ ಕಾರಣದಿಂದ ವರ್ಚುವಲ್‌ ಮೂಲಕ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

Advertisement

ಆದರೆ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದಸಿಂಗ್‌, ಮೇಲ್ಮನೆ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ, ಜಿಲ್ಲೆಯ ಸಂಸದ, ಎಲ್ಲ ಶಾಸಕರು, ವಿವಿಧ ನಿಗಮಗಳ ಅಧ್ಯಕ್ಷರು, ಹಿರಿಯ ಅ ಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರು, ಬಸವರಾಜ ಬೈಚಬಾಳ, ವಿಜಯ ಜೋಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next