Advertisement

ಒಂದು ಪಡಿತರ ಚೀಟಿ’ಗೆ 2020ರ ಜೂ.30ರ ಗಡುವು

02:21 AM Jun 30, 2019 | Sriram |

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಪರಿಕಲ್ಪನೆಯ ಸಾಕಾರಕ್ಕೆ 2020ರ ಜೂ. 30ರ ಗಡುವನ್ನು ವಿಧಿಸಲಾಗಿದ್ದು, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಇತ್ತೀಚೆಗೆ ಪತ್ರದ ಮುಖೇನ ಸೂಚಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಪಡಿತರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ.

Advertisement

ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಹರ್ಯಾಣ, ಜಾರ್ಖಂಡ್‌, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಹಾಗೂ ತ್ರಿಪುರಾ ರಾಜ್ಯಗಳು ತಮ್ಮಲ್ಲಿನ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್‌) ಈಗಿರುವ ಪಡಿತರ ಚೀಟಿಗಳನ್ನು ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಮಾದರಿಗೆ ಬದಲಾಯಿಸಲು ಚಾಲನೆ ನೀಡಿವೆ.

ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ‘ಪಾಯಿಂಟ್ ಆಫ್ ಸೇಲ್’ (ಪಿಒಎಸ್‌)
ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಈ ಯೋಜನೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು. ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಲು ರೇಷನ್‌ ಕಾರ್ಡ್‌ ಹೊಂದಿರುವವರು ತಮ್ಮ ಆಧಾರ್‌ ಕಾರ್ಡ್‌ ತೋರಿಸುವುದು ಕಡ್ಡಾಯವಾಗಿದೆ. ಆದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್‌) ಯೋಜನೆಯಲ್ಲಿ ನೋಂದಾಯಿಸಲು ಇನ್ನು ಕೇವಲ ಪಡಿತರ ಚೀಟಿಯೊಂದರ ಸಾಕ್ಷ್ಯವೇ ಸಾಕಾಗಲಿದೆ ಎಂದ ಸಚಿವರು, ”ಒಂದು ಕುಟುಂಬ ಸದಸ್ಯ ಬೇರೊಂದು ರಾಜ್ಯಕ್ಕೆ ಹೋದರೆ ಅಲ್ಲಿ ಆತನಿಗೆ ಆತನ ಕುಟುಂಬದ ಪಡಿತರ ಚೀಟಿಯ ಆಧಾರದಲ್ಲಿ ಗರಿಷ್ಠ ಎಷ್ಟು ಪಡಿತರ ಪಡೆಯಬಹುದು ಎಂಬುದನ್ನು ಸರ್ಕಾರ ಸದ್ಯದಲ್ಲೇ ನಿಯಮ ರೂಪಿಸಲಿದೆ” ಎಂದರು.

ಅಧಿಕಾರಿಗಳ ಸ್ಪಷ್ಟನೆ
ಕೆಲವೊಂದು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಪಿಡಿಎಸ್‌ ಉಚಿತ ಪಡಿತರ ಸೌಲಭ್ಯವು ಹೊರ ರಾಜ್ಯಗಳಿಂದ ಬರುವ ಕುಟುಂಬಕ್ಕೆ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು, ”ಅಂಥ ಸಂದರ್ಭಗಳಲ್ಲಿ ಆ ನಿಗದಿತ ಧಾನ್ಯಗಳಿಗೆ ಕೇಂದ್ರ ವಿಧಿಸಿರುವ ದರದ ಆಧಾರದಲ್ಲೇ (ಪ್ರತಿ ಕೆ.ಜಿ.ಗೆ 1ರಿಂದ 3 ರೂ.) ವಲಸೆ ಬಂದ ಕುಟುಂಬ ಕೊಳ್ಳಬೇಕಾಗುತ್ತದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next