ಹಿರಿಯೂರು: ವಾಣಿವಿಲಾಸ ಸಾಗರದ ಡೆಡ್ ಸ್ಟೋರೇಜ್ ನೀರು ಪಂಪ್ ಮಾಡುವುದನ್ನು ನಿಲ್ಲಿಸಬೇಕು ಮತ್ತು ವಿವಿ ಸಾಗರಕ್ಕೆ ಶೀಘ್ರ ಭದ್ರಾ ನೀರು ಹರಿಸುವಂತೆ ಆಗ್ರಹಿಸಿ ಸೋಮವಾರ ವಿವಿ ಸಾಗರ ಹೋರಾಟ ಸಮಿತಿ ‘ಹಿರಿಯೂರು ಬಂದ್’ಗೆ ಕರೆ ನೀಡಿತ್ತು.
ಹೋರಾಟ ಸಮಿತಿ ಗೌರವಾಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ಡೆಡ್ ಸ್ಟೋರೇಜ್ ನೀರು ಕುಡಿಯಲು ಯೋಗ್ಯವಾಗಿಲ್ಲ. ಆ ನೀರನ್ನು ಅಂರ್ತಜಲ ರಕ್ಷಣೆಗೆ ಮಾತ್ರ ಬಳಕೆ ಮಾಡಬಹುದು. ಅಲ್ಲದೆ ಜಲಚರದ ರಕ್ಷಣೆಯಾಗುತ್ತದೆ. ರಕ್ಷಣೆ ಯಾಗುತ್ತದೆ, ನೀರು ಪಂಪ್ ಮಾಡಿದರೆ ಜಲ, ಚರಗಳ ಸಾವಿನಿಂದ ನೀರು ಮತ್ತಷ್ಟು ಕಲುಷಿತವಾಗಿ ದುಷ್ಪರಿಣಾಮ ಉಂಟಾಗುತ್ತದೆ ಮತ್ತು ಜಲಾಶಯಕ್ಕೂ ತೊಂದರೆಯಾಗುತ್ತದೆ. ಈ ಎಲ್ಲ ಅಂಶಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ವಿವಿ ಸಾಗರಕ್ಕೆ ನೀರು ಹರಿಸಬೇಕು. ನೀರು ಪಂಪ್ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ, ತಾಲೂಕು ರೈತ ಸಂಘದ ಅಧ್ಯಕ್ಷ ಹೊರಕೇರಪ್ಪ, ಮುಖಂಡರಾದ ಆರನಕಟ್ಟೆ ಶಿವಕುಮಾರ್, ಎನ್. ಎಲ್. ಬಸವರಾಜ್, ಬಿ.ಕೆ. ಉಗ್ರಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಬಬ್ಬೂರು ಸುರೇಶ್, ತಾಪಂ ಸದಸ್ಯ ಯಶವಂತ್, ನಗರಸಭೆ ಸದಸ್ಯರಾದ ಪಾಂಡು, ರೈತ ಮಹಿಳೆ ವೇದಾ ಶಿವಕುಮಾರ್, ಸಿದ್ದರಾಮಣ್ಣ, ವಕೀಲರಾದ ಸಂಜಯ್, ಪತ್ರಕರ್ತ ಮಾಲತೇಶ್ ಅರಸ್, ಕೆ.ಟಿ. ತಿಪ್ಪೇಸ್ವಾಮಿ, ವೀರಣ್ಣ, ಅಜಗರ್ ಅಹಮ್ಮದ್, ಅಬ್ದುಲ್ ಸರ್ದಾರ್, ನೂರ್ ಅಹಮ್ಮದ್, ಸಿಪಿಐನ ಎಸ್.ಸಿ. ಕುಮಾರ್, ಪಿಲಾಲಿ ಮಂಜು, ಜಿ.ಎಲ್. ಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
Advertisement
ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಆಗಮಿಸಿ ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು. ನಂತರ ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಿತು. ರೈತ ಮುಖಂಡ ಕಸವನಹಳ್ಳಿ ರಮೇಶ್ ಮಾತನಾಡಿ, ಸರ್ಕಾರ ಸಂಜೆಯೊಳಗೆ ತೀರ್ಮಾನ ಮಾಡಿ ಡೆಡ್ ಸ್ಟೋರೇಜ್ ನೀರು ಪಂಪ್ ಮಾಡುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ನಾಳೆ ವಿವಿ ಸಾಗರ ಜಲಾಶಯಕ್ಕೆ ಮುತ್ತಿಗೆ ಹಾಕಿ ನೀರು ಪಂಪ್ ಮಾಡುವುದನ್ನು ರೈತರೇ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಸರ್ಕಾರದೊಂದಿಗೆ ಮಾತು ಕತೆ ನಡೆಸಬೇಕು. ಇಲ್ಲದಿದ್ದರೆ ನಾಳೆ ವಿವಿ ಸಾಗರದಲ್ಲಿ ನಡೆಯಲಿರುವ ಹೋರಾಟಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.•ಕಸವನಹಳ್ಳಿ ರಮೇಶ್, ರೈತ ಮುಖಂಡ.