Advertisement

ಡೆಡ್‌ ಸ್ಟೋರೇಜ್‌ ನೀರು ಕುಡಿಯಲು ಬಳಕೆ

03:45 AM Apr 09, 2017 | Harsha Rao |

ಬೆಂಗಳೂರು: ಕಾವೇರಿ ಕೊಳ್ಳದ ಜನರಿಗೆ ಕುಡಿಯುವ ನೀರು ಪೂರೈಸಲು ಕೃಷ್ಣರಾಜಸಾಗರ ಜಲಾಶಯದ ಡೆಡ್‌ ಸ್ಟೋರೇಜ್‌ ನೀರು ಬಳಸಲು ಮುಂದಾಗಿರುವ ಸರ್ಕಾರ ಇದೀಗ ರಾಜ್ಯದ ಇತರ ಜಲಾಶಯಗಳಲ್ಲಿರುವ ಡೆಡ್‌ ಸ್ಟೋರೇಜ್‌ ನೀರನ್ನು ಕುಡಿಯಲು ಪೂರೈಸುವ ಬಗ್ಗೆಯೂ ಚಿಂತನೆ ನಡೆಸಿದೆ. ಬರಗಾಲದ ಹಿನ್ನೆಲೆಯಲ್ಲಿ ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಎಲ್ಲಾ ಜಲಾಶಯಗಳಲ್ಲೂ ನೀರು ಬತ್ತಿ ಹೋಗುತ್ತಿದ್ದು, ಕುಡಿಯುವ ನೀರು ಪೂರೈಕೆಗೆ ಡೆಡ್‌ ಸ್ಟೋರೇಜ್‌ ನೀರು ಬಳಕೆ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ತಳದಲ್ಲಿ ಸಂಗ್ರಹವಾಗಿರುವ ನೀರನ್ನು ಮೇಲೆತ್ತಿ ಕುಡಿಯಲು ಪೂರೈಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಸೋಮವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

Advertisement

ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆಯುವ ಈ ಸಭೆಯಲ್ಲಿ ಎಲ್ಲಾ ನೀರಾವರಿ ನಿಗಮಗಳ ವ್ಯವಸ್ಥಾಪಕ
ನಿರ್ದೇಶಕರು, ಜಲಸಂಪನ್ಮೂಲ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಲಾಶಯದ ಡೆಡ್‌ ಸ್ಟೋರೇಜ್‌ ನೀರು ಬಳಕೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೃಷ್ಣಾ ನದಿ ಪಾತ್ರವನ್ನು ಹೊರತುಪಡಿಸಿದರೆ ಉಳಿದಂತೆ ಕಾವೇರಿ, ತುಂಗಭದ್ರಾ ಸೇರಿದಂತೆ ಬಹುತೇಕ ಜಲಾನಯನ
ಪಾತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದು ಒಂದೆಡೆಯಾದರೆ, ಬಿಸಿಲನ ಝಳಕ್ಕೆ ಜಲಾಶಯಗಳಲ್ಲಿ ಲಭ್ಯರುವ ನೀರಿನ ಪೈಕಿ ಶೇ.50ರಷ್ಟು ನೀರು ಆವಿಯಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ದಿನಕಳೆದಂತೆ ಜಲಾಶಯದ ನೀರು ಆಳಕ್ಕೆ ಹೋಗುತ್ತಿದ್ದು, ಈ ಬಾರಿ ನೀರು ಆವಿಯಾಗುತ್ತಿರುವ ಸ್ಥಿತಿ ಗಮನಿಸಿದರೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಮೇ ಅಂತ್ಯದ ವೇಳೆಗೆ ತಳ ಕಾಣಲಿದೆ. ಹೀಗಾಗಿ, ಡೆಡ್‌ ಸ್ಟೋರೇಜ್‌ ನೀರನ್ನು ಮೇಲೆತ್ತಿ ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ.

ನೀರು ಬಳಕೆಗೆ ಕಠಿಣ ಷರತ್ತು: ಈ ಮಧ್ಯೆ, ನೀರಿನ ಬೇಕಾಬಿಟ್ಟಿ ಬಳಕೆಯಿಂದ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿರುವ
ಹಿನ್ನೆಲೆಯಲ್ಲಿ ಜಲಾಶಯಗಳಿಂದ ಪೂರೈಸುವ ನೀರಿನ ಬಳಕೆಗೂ ಸರ್ಕಾರ ಕಠಿಣ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಪ್ರಸ್ತುತ ಜಲಾಶಯಗಳಿಂದ ನಗರ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆ ಪೂರೈಸುತ್ತಿರುವ ನೀರಿನಲ್ಲಿ ಶೇ.30ರಷ್ಟು ಪೋಲಾಗುತ್ತಿದೆ. ಇದು ರಾಷ್ಟ್ರೀಯ ಸರಾಸರಿಗಿಂತ (ಶೇ.20) ಶೇ.10ರಷ್ಟು ಹೆಚ್ಚು. ಹೀಗಾಗಿ, ಸೋಮವಾರ ನಡೆಯುವ ಸಭೆಯಲ್ಲಿ ಕೆಲವು ಕಠಿಣ ಷರತ್ತುಗಳನ್ನು ವಿಧಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ
ಸಾಧ್ಯತೆ ಇದೆ. ಪ್ರತಿ ವ್ಯಕ್ತಿಗೆ ಇಂತಿಷ್ಟು ಪ್ರಮಾಣದ ನೀರು ಬಿಡುಗಡೆ ಮಾಡಬೇಕು ಎಂದು ಆದೇಶಿಸಲಾಗುವುದು ಎಂದು ಮೂಲಗಳು ಹೇಳಿವೆ.

ಕಾವೇರಿ ನದಿ ಪಾತ್ರದಲ್ಲಿ ನೀರಿನ ತೀವ್ರ ಕೊರತೆ ಇರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ನೀರು ಬಿಟ್ಟರೂ ರೈತರು ಮೋಟಾರು ಪಂಪ್‌ಗ್ಳನ್ನು ಬಳಸಿ ಅದನ್ನು ತಮ್ಮ ಬೆಳೆಗಳಿಗೆ ಹಾಯಿಸಿಕೊಳ್ಳುವ ಸಾಧ್ಯತೆ ಇದ್ದು, ತಮಿಳುನಾಡಿಗೆ ತಲುಪುವುದು ಕಷ್ಟಕರ. ಇದೇ ಪರಿಸ್ಥಿತಿ ಇತರ ಜಲಾಶಯಗಳಲ್ಲೂ ಇದ್ದು, ಕುಡಿಯುವ ಉದ್ದೇಶಕ್ಕಾಗಿ ಕಾಲುವೆಗಳ ಮೂಲಕ ನೀರು ಬಿಟ್ಟರೆ ರೈತರು ಅದನ್ನು ಕೃಷಿಗೆ
ಬಳಸಿಕೊಳ್ಳಬಹುದು. ಇದನ್ನು ಹೇಗೆ ತಡೆಗಟ್ಟುವುದು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ.

Advertisement

ಇನ್ನೊಂದೆಡೆ ರಾಜಧಾನಿಗೆ ಪೂರೈಸುವ ಕಾವೇರಿ ನೀರು ಹೆಚ್ಚು ಪೋಲಾಗುತ್ತಿದೆ. ಈ ಕಾರಣಕ್ಕಾಗಿ ಸೋಮವಾರದ ಸಭೆಗೆ ಬೆಂಗಳೂರು ಜಲ ಮಂಡಳಿ, ಕರ್ನಾಟಕ ನೀರು ಸರಬರಾಜು ಮಂಡಳಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಗಳ ಪ್ರಮುಖರನ್ನೂ ಆಹ್ವಾನಿಸಲಾಗಿದೆ. ಒಟ್ಟಿನಲ್ಲಿ ಜಲಾಶಯಗಳ ಈಗಿನ ನೀರಿನ ಮಟ್ಟ ಮತ್ತು ಆವಿಯಾಗುತ್ತಿರುವ ನೀರಿನ ಪ್ರಮಾಣ ಆಧರಿಸಿ ಮೇ ತಿಂಗಳ ಬಳಿಕ ಡೆಡ್‌ ಸ್ಟೋರೇಜ್‌ ನೀರು ಬಳಕೆ ಕುರಿತಂತೆ ಸೋಮವಾರದ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ಮತ್ತು ಕೃಷಿ ಉದ್ದೇಶಕ್ಕೆ ಜಲಾಶಯಗಳ ನೀರು ಬಳಕೆಗೆ ಕಡಿವಾಣ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಎಷ್ಟು ಹಣ ಕೊಟ್ಟರೂ ಮಹಾರಾಷ್ಟ್ರದಿಂದ ನೀರಿಲ್ಲ
ಕಳೆದ ವರ್ಷ ಕೃಷ್ಣಾ ನದಿಗೆ ನಾರಾಯಣಪುರ ಬಳಿ ನಿರ್ಮಿಸಿರುವ ಜಲಾಶಯದಿಂದ ಮಹಾರಾಷ್ಟ್ರಕ್ಕೆ ನಿಗದಿತ ನೀರು ಪೂರೈಕೆಯಾಗಿಲ್ಲ. ಈ ಬಾರಿಯೂ ಅದೇ ಪರಿಸ್ಥಿತಿ ಇದೆ. ಹೀಗಾಗಿ, ಈ ಬಾರಿ ಏಪ್ರಿಲ್‌ನಿಂದ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬರುವುದು ಅನುಮಾನ ಎನ್ನುವಂತಾಗಿದೆ. ನಮ್ಮ ಪಾಲಿನ ನೀರು ಬಾರದ ಕಾರಣ
ಹಣ ಕೊಟ್ಟರೂ ನೀರು ಬಿಡಲು ಸಾಧ್ಯವಿಲ್ಲ ಎಂಬ ಸಂದೇಶ ಮಹಾರಾಷ್ಟ್ರ ಕಡೆಯಿಂದ ಬಂದಿದ್ದು, ಕೃಷ್ಣಾ ಕೊಳ್ಳದ ಜನರಲ್ಲಿ ಇದು ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next