ಬೀಜಿಂಗ್: ಕೊರೊನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಡುವೆಯೇ ಕೊರೊನಾ ವೈರಸ್ ತವರಾದ ಚೀನಾದ ವುಹಾನ್ ನಲ್ಲಿ ಶಾಪಿಂಗ್ ಗೆ ಬಂದ ವ್ಯಕ್ತಿಯೊಬ್ಬರು ನಿರ್ಜನ ರಸ್ತೆ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಚೀನಾದ ವುಹಾನ್ ಜನನಿಬಿಡ ಪ್ರದೇಶವಾಗಿದ್ದು, ಅಂದಾಜು 11 ಮಿಲಿಯನ್ ಜನರು ವಾಸವಾಗಿದ್ದಾರೆ. ಆದರೆ ಕೊರೊನಾ ವೈರಸ್ ಅದೆಂತಹ ಭಯ ಹುಟ್ಟಿಸಿದೆ ಎಂದರೆ ನಿರ್ಜನ ರಸ್ತೆ ಮೇಲೆ ವ್ಯಕ್ತಿ ಸಾವನ್ನಪ್ಪಿದ್ದರೂ ಒಬ್ಬರೇ ಒಬ್ಬರು ಹತ್ತಿರವೂ ಸುಳಿಯುವ ಧೈರ್ಯ ತೋರಿಲ್ಲ ಎಂದು ವರದಿ ವಿವರಿಸಿದೆ.
ಗುರುವಾರ ಬೆಳಗ್ಗೆ ನಿರ್ಜನ ರಸ್ತೆ ಮೇಲೆ ಕೊರೊನಾ ವೈರಸ್ ಗೆ ಸಾವನ್ನಪ್ಪಿರುವ ವ್ಯಕ್ತಿಯನ್ನು ಎಎಫ್ ಪಿ ಪತ್ರಕರ್ತರೊಬ್ಬರು ಗಮನಿಸಿದ್ದರು. ನಂತರ ಪೂರ್ಣ ಪ್ರಮಾಣದ ಸುರಕ್ಷತಾ ಬಟ್ಟೆ ಧರಿಸಿ ಪೊಲೀಸರು ಮತ್ತು ಮೆಡಿಕಲ್ ಸಿಬ್ಬಂದಿಗಳು ಆಂಬುಲೆನ್ಸ್ ನಲ್ಲಿ ಆಗಮಿಸಿದ್ದರು ಎಂದು ತಿಳಿಸಿದ್ದಾರೆ.
ಮುಚ್ಚಿರುವ ಪೀಠೋಪಕರಣಗಳ ಅಂಗಡಿ ಮುಂಭಾಗ ಈ ವ್ಯಕ್ತಿ ಸಾವನ್ನಪ್ಪಿದ್ದು, ಮೆಡಿಕಲ್ ಸಿಬ್ಬಂದಿಗಳು ವ್ಯಕ್ತಿಯನ್ನು ನೀಲಿ ಬ್ಲ್ಯಾಂಕೆಟ್ ನಲ್ಲಿ ಸುತ್ತಿ ಕೊಂಡೊಯ್ದಿರುವುದಾಗಿ ವರದಿ ವಿವರಿಸಿದೆ. ಏತನ್ಮಧ್ಯೆ 60 ವರ್ಷದ ವ್ಯಕ್ತಿ ಹೇಗೆ ಹೊರಗೆ ಬಂದು ಸಾವನ್ನಪ್ಪಿದ್ದರು ಎಂಬ ಬಗ್ಗೆ ಎಎಫ್ ಪಿ ವರದಿ ವಿವರಿಸಿಲ್ಲ ಎಂದು ಹೇಳಿದೆ.
ಘಟನೆ ಬಗ್ಗೆ ಪೊಲೀಸರು ಹಾಗೂ ಮೆಡಿಕಲ್ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಎಎಫ್ ಪಿ ತಿಳಿಸಿದೆ. ಈ ವ್ಯಕ್ತಿ ಕೊರೊನಾ ವೈರಸ್ ನಿಂದಲೇ ಸಾವನ್ನಪ್ಪಿರುವುದಾಗಿ ಮಹಿಳೆಯೊಬ್ಬರು ಶಂಕಿಸಿರುವುದಾಗಿ ವರದಿ ಹೇಳಿದೆ. ವುಹಾನ್ ನಲ್ಲಿ ಭಯಾನಕ ಸ್ಥಿತಿ ಕಂಡು ಬಂದಿದ್ದು, ಹಲವು ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಚೀನಾದಲ್ಲಿ ಸಾವಿರಾರು ಮಂದಿ ಕೊರೊನಾ ವೈರಸ್ ಗೆ ತುತ್ತಾಗಿದ್ದು, ವುಹಾನ್ ಪ್ರಾಂತ್ಯದಲ್ಲಿಯೇ 159 ಜನರು ಈವರೆಗೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.