Advertisement
ಭಾರತದ ಕೆಲವೇ ಜನರಲ್ಲಿರುವ ಸಂಸ್ಕೃತ ಯುನೈಟೆಡ್ ಕಿಂಗ್‌ಡಮ್‌ನ ಶಾಲೆ, ವಿ.ವಿ.ಗಳಲ್ಲಿ ಆಸಕ್ತಿ ಕೆರಳಿಸಿವೆ. ಲಂಡನ್‌ನ ಸೈಂಟ್ ಜೇಮ್ಸ್ ಜೂನಿಯರ್ ಶಾಲೆಯಲ್ಲಿ ಬಹುತೇಕ ಮಕ್ಕಳು ಸಂಸ್ಕೃತ ಓದಲು ತುದಿಗಾಲಲ್ಲಿ ನಿಂತಿದ್ದಾರೆ. 1975ರಲ್ಲಿ ಆರಂಭವಾದ ಈ ಹವೆ ಈಗ ಆಂದೋಲನ ರೂಪದಲ್ಲಿದೆ. “It gives them brilliant linguistic training” ಎಂದು ಸಂಸ್ಕೃತ ವಿಭಾಗ ಮುಖ್ಯಸ್ಥ ವಾರ್‌ವಿಕ್ ಜೆಸಾಪ್ ಹೇಳಿರುವುದನ್ನು ಎನ್‌ಡಿಟಿವಿ ಕಾಮ್ ವರದಿ ಮಾಡಿದೆ. ಸೈಂಟ್ ಜೇಮ್ಸ್ ಶಾಲೆ ಸಂಸ್ಕೃತ ಭಾಷೆಗಾಗಿ ಆಂದೋಲನವನ್ನೇ ಆರಂಭಿಸಿದೆ. ಅಮೆರಿಕದಲ್ಲಿ ವಿದೇಶೀ ಭಾಷೆ ಕಲಿಯಲು ಅವಕಾಶವಿದ್ದು, ಭಾರತದ ಸಂಸ್ಕೃತ ಭಾರತೀ ಸಂಘಟನೆ “ಸ್ಯಾಂಸ್ಕೃತ್ ಆ್ಯಸ್ ಫಾರಿನ್ ಲ್ಯಾಂಗ್ವೇಜ್’ ಪ್ರಕಲ್ಪ ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಲಂಡನ್‌ನ ಎಸ್‌ಒಎಎಸ್ ವಿ.ವಿ. ಸಂಜೆಯ ಸಂಸ್ಕೃತ ಕೋರ್ಸ್ ನಡೆಸುತ್ತಿದ್ದು, 2017ಕ್ಕೆ ಅಂತರ್ಜಾಲದಲ್ಲಿ ಅರ್ಜಿ ಆಹ್ವಾನಿಸಿದೆ.
ಸಂಸ್ಕೃತ ಭಾರತೀ ಅಂಚೆ ಮೂಲಕ ಸಂಸ್ಕೃತವನ್ನು ತೆಲುಗು, ಕನ್ನಡ, ತಮಿಳು, ಗುಜರಾತಿ, ಮರಾಠಿ, ಹಿಂದಿ, ಅಸ್ಸಾಮಿ, ಒಡಿಯ, ಬಂಗಾಲಿ, ಮಲಯಾಳ, ಇಂಗ್ಲಿಷ್ ಈ 11 ಭಾಷೆಗಳಲ್ಲಿ ಕಲಿಸುತ್ತಿದೆ. ಮಾಸ ಪತ್ರಿಕೆ ‘ಸಂಭಾಷಣಾ ಸಂದೇಶ’ಕ್ಕೆ 14 ದೇಶಗಳಲ್ಲಿ ಲಕ್ಷ ಚಂದಾದಾರರಿದ್ದಾರೆ. ಸಂಸ್ಕೃತ ಭಾರತಿಯನ್ನು ಕಟ್ಟಿ ಬೆಳೆಸಿದ ಎಚ್.ಆರ್. ವಿಶ್ವಾಸ್, ಜನಾರ್ದನ ಹೆಗಡೆ, ಚ.ಮೂ. ಕೃಷ್ಣಶಾಸ್ತ್ರಿಯಂತಹ ವಿದ್ವಾಂಸರು ವೃತ್ತಿ ಜೀವನದಲ್ಲಿದ್ದರೆ ವಿ.ವಿ. ಕುಲಪತಿ ವರೆಗೆ ಹೋಗುವ ಸಾಮರ್ಥ್ಯ ಹೊಂದಿದವರು. ಸಂಸ್ಕೃತ ಭಾರತೀ ಯುವಕರು, ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ಹೀಗೆ ವಿವಿಧ ವಯೋಮಾನದವರು ಸಂಸ್ಕೃತದಲ್ಲಿ ಮಾತನಾಡುವಂತೆ ಮಾಡುತ್ತಿದೆ. ಇಂತಹ 1.35 ಲಕ್ಷ ಶಿಬಿರಗಳ ಮೂಲಕ 95 ಲಕ್ಷ ಜನರಿಗೆ ಸಂಸ್ಕೃತದಲ್ಲಿ ಮಾತನಾಡಲು ಕಲಿಸಿದೆ. 20,000 ಸ್ಥಳೀಯ ಕಾರ್ಯಕರ್ತರ ಪಡೆ ಇದೆ.
Related Articles
ಸಂಸ್ಕೃತ ಸಮ್ಮೇಳನದಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತ ಒಂದು ಸ್ಥಾನದಿಂದ ಒಬ್ಬರೇ ಎಂಬ ನಿಯಮದಂತೆ 2,000 ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ 100 ಮಂದಿ ಈಶಾನ್ಯ ಭಾರತದಿಂದ, ಒಟ್ಟು 600 ಮಹಿಳಾ ಕಾರ್ಯಕರ್ತರು ಬರುತ್ತಿದ್ದಾರೆ. ಅಗತ್ಯವುಳ್ಳ ಮಹಿಳಾ ಕಾರ್ಯಕರ್ತರನ್ನು ಶ್ರೀಕೃಷ್ಣ ಮಠದ ಆಸುಪಾಸಿನ ಮನೆಗಳಲ್ಲಿ ಉಳಿಸಿಕೊಳ್ಳುತ್ತಿರುವುದು, ಸಂಸ್ಕೃತ ಭಾರತೀ ಕಾರ್ಯಾಲಯಕ್ಕಾಗಿ ಉಡುಪಿ ನಗರದಲ್ಲಿರುವ ಉದ್ಯಾವರದ ವಿಠಲ ಕಾಮತ್ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿರುವುದು, ಮೂರು ವಿ.ವಿ.ಗಳಲ್ಲಿ ಕುಲಪತಿಯಾಗಿದ್ದು, ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಕೃತ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ| ಕುಟುಂಬ ಶಾಸ್ತ್ರಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಜಮ್ಮು ಕ್ಯಾಂಪಸ್ ಪ್ರಾಂಶುಪಾಲರಾಗಿದ್ದ, ಜೀವನವಿಡೀ ಸ್ವಯಂಪಾಕ ವ್ರತ ನಡೆಸುತ್ತಿರುವ (ಸ್ವತಃ ಅಡುಗೆ ಮಾಡಿ ಊಟ ಮಾಡುವ) ಡಾ| ರಾಮಾನುಜ ದೇವನಾಥನ್, ಸಾಹಿತಿ ಚೆನ್ನೈನ ಜೋ ಡಿ’ಕ್ರೂಸ್, ಸಿಬಿಎಸ್‌ಇ ಅಧ್ಯಕ್ಷರು, ಇಸ್ರೋ ಅಧ್ಯಕ್ಷರು, ರಾಷ್ಟ್ರೀಯ ಪಾಂಡುಲಿಪಿ ಮಿಶನ್ ನಿರ್ದೇಶಕರಂತಹ ವಿವಿಧ ಕ್ಷೇತ್ರಗಳ ಹಿರಿಯರು ಪಾಲ್ಗೊಳ್ಳುತ್ತಿರುವುದು ವಿಶೇಷ ಘಟನೆಗಳಾಗಲಿವೆ. ಜ. 5 ಸಂಜೆ 5.30ಕ್ಕೆ ಅಪೂರ್ವ ಪ್ರದರ್ಶಿನಿ, ಜ. 6 ಬೆಳಗ್ಗೆ 10ಕ್ಕೆ ಅಧಿವೇಶನದ ಉದ್ಘಾಟನೆ ನಡೆಯಲಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಜ. 8ರ ವರೆಗೆ ಬೆಳಗ್ಗೆ 8.30ರಿಂದ ರಾತ್ರಿ 8.30 ರವರೆಗೆ ಭೇಟಿ ನೀಡಬಹುದು.
Advertisement
ದೇಶ ವಿದೇಶಗಳಲ್ಲಿಸಂಸ್ಕೃತ ಭಾರತೀ ಈಗ ಎಲ್ಲ ರಾಜ್ಯಗಳು, 549 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 114 ಪೂರ್ಣಕಾಲೀನ ಕಾರ್ಯಕರ್ತರನ್ನು ಹೊಂದಿದ ಸಂಸ್ಥೆಯ ಚಟುವಟಿಕೆ ದೇಶದ 4,612 ಕಡೆಗಳಲ್ಲಿ ನಡೆಯುತ್ತಿದೆ. ಅಮೆರಿಕ, ಕೆನಡ, ಇಸ್ರೇಲ್, ಕೆರೆಬಿಯನ್, ಗಯಾನ, ಟ್ರಿನಿಡಾಡ್, ಮಾರಿಷಸ್, ಆಸ್ಟ್ರೇಲಿಯ, ನ್ಯೂಜಿಲಂಡ್, ಕೊಲ್ಲಿ ರಾಷ್ಟ್ರ ಹೀಗೆ 39 ದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳು ನಡೆದಿವೆ. ದುಬೈ ಮೊದಲಾದ 13 ದೇಶಗಳಲ್ಲಿ ನಿರಂತರ ಶಿಬಿರಗಳು ನಡೆಯುತ್ತಿವೆಯಲ್ಲದೆ ಪೂರ್ಣಾವಧಿ ಕಾರ್ಯಕರ್ತರು ಮೂಡಿಬಂದಿದ್ದಾರೆ. ಅಮೆರಿಕದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ನ್ಯೂಜೆರ್ಸಿ, ವಾಷಿಂಗ್ಟನ್, ಕ್ಯಾಲಿಫೋರ್ನಿಯ, ಲಾಸ್‌ಏಂಜಲೀಸ್ ಮೊದಲಾದೆಡೆ ವಾರಾಂತ್ಯ ಶಿಬಿರಗಳು ನಡೆಯುತ್ತಿವೆ. ಇದಕ್ಕೆ ಟೆಕ್ಕಿಗಳು, ಮಕ್ಕಳು, ಮಹಿಳೆಯರು ಬರುತ್ತಿದ್ದಾರೆ. ಕ್ರಿಸ್ಮಸ್, ಆಗಸ್ಟ್ ರಜೆಗಳಲ್ಲಿ ಶಿಬಿರಗಳು ನಡೆಯುತ್ತಿವೆ.