Advertisement

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

11:17 PM May 14, 2024 | Team Udayavani |

ಪಡುಬಿದ್ರಿ: ಮರುವಾಯಿ ಹೆಕ್ಕಲು ಶಾಂಭವಿ ಹೊಳೆಗಿಳಿದ ಸಂದರ್ಭ ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯರನ್ನು ರಕ್ಷಿಸಲು ತೆರಳಿ ನೀರು ಪಾಲಾಗಿದ್ದ ಅಭಿಲಾಷ್‌ (24) ಮೃತದೇಹ ಮಂಗಳವಾರ ಸಂಜೆ ಹೆಜಮಾಡಿಕೋಡಿಯ ಬೈತೋಟ ಬಳಿಯ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

Advertisement

ಕರಾವಳಿ ಪೊಲೀಸ್‌ ಪಡೆಯ ಸಿಬಂದಿ ರಾಕೇಶ್‌ ಅವರ ಜತೆಗೆ ಚರಣ್‌ ಮತ್ತು ಗುರು ಅವರು ಗಸ್ತಿನಲ್ಲಿದ್ದ ಸಂದರ್ಭ ಸಮುದ್ರದ ಅಲೆಗಳ ಮಧ್ಯೆ ಮೃತದೇಹ ಕಂಡುಬಂದಿದ್ದು ತತ್‌ಕ್ಷಣ ಕಾರ್ಯಪ್ರವರ್ತರಾಗಿ ದಡಕ್ಕೆ ಎಳೆದು ತಂದಿದ್ದಾರೆ. ಬಳಿಕ ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಅಭಿಲಾಷ್‌ ಕುಟುಂಬಿಕರು ಆಗಮಿಸಿ ಮೃತದೇಹದ ಗುರುತು ಹಿಡಿದಿದ್ದಾರೆ.

ರವಿವಾರ ಬೆಳಗ್ಗೆ 7.30ರ ವೇಳೆಗೆ 10 ಮಂದಿ ಗೆಳೆಯರು ಬಜಪೆಯಿಂದ ಅಗಮಿಸಿ ಮರುವಾಯಿ ಹೆಕ್ಕಲು ಶಾಂಭವಿ ಹೊಳೆಗೆ ಇಳಿದಿದ್ದರು. ಅಳಿವೆ ಬಾಗಿಲಿನಲ್ಲಿ ಇಬ್ಬರು ಗೆಳೆಯರು ಮುಳುಗುತ್ತಿದ್ದಾಗ ಅವರನ್ನು ರಕ್ಷಿಸಲು ಈಜು ತಿಳಿದ ಬಜಪೆ ಅದ್ಯಪಾಡಿಯ ಹಳೇ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್‌ ತೆರಳಿದ್ದರು. ಆದರೆ ಗೆಳೆಯರಿಬ್ಬರನ್ನು ಮೀನುಗಾರಿಕಾ ದೋಣಿಯೊಂದರ ಸಿಬಂದಿ ರಕ್ಷಿಸಿದ್ದು, ಅಭಿಲಾಷ್‌ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು.

ಸೋಮವಾರದಿಂದ ಘಟನೆ ನಡೆದ ಸ್ಥಳ ಅಳಿವೆ ಬಾಗಿಲಿನಲ್ಲಿ ಈಶ್ವರ್‌ ಮಲ್ಪೆ ಮತ್ತು ರಾಜ್ಯ ವಿಪತ್ತು ಸ್ಪಂದನ ಪಡೆಯವರು ಕರಾವಳಿ ಕಾವಲು ಪಡೆ ಮತ್ತು ಸಾರ್ವಜನಿಕರ ನೆರವಿನೊಂದಿಗೆ ಹುಡುಕಾಟ ನಡೆಸುತ್ತಿದ್ದರು.

ತಿಂಗಳ ಹಿಂದೆ ಅಕ್ಕನ ನಿಶ್ಚಿತಾರ್ಥ
ಬಜಪೆ: ಅದ್ಯಪಾಡಿಯ ಕೂಲಿಕಾರ್ಮಿಕ ದಂಪತಿ ಎಂ.ಎಂ. ರಮೇಶ್‌ ಮತ್ತು ಶಾರದಾ ಅವರ ಮೂವರು ಮಕ್ಕಳಲ್ಲಿ ಅಭಿಲಾಷ್‌ ಮಾತ್ರ ಪುತ್ರನಾಗಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಅಭಿಲಾಷ್‌ ಅವರ ಅಕ್ಕನ ವಿವಾಹ ನಿಶ್ಚಿತಾರ್ಥ ಒಂದು ತಿಂಗಳ ಹಿಂದೆಯಷ್ಟೇ ನಡೆದಿತ್ತು. ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Advertisement

ಉತ್ತಮ ಕ್ರೀಡಾಪಟು ಆಗಿದ್ದ ಅಭಿಲಾಷ್‌ ಅವರು ವಾಲಿಬಾಲ್‌ ಮತ್ತು ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದರು. ಮೆಕಾನಿಕ್‌ ವಿಭಾಗದಲ್ಲಿ ಐಟಿಐ ಮುಗಿಸಿದ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನಲ್ಲಿ ರೈಲ್ವೇಯಲ್ಲಿ ಗುತ್ತಿಗೆ ನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next