ಶಿವಮೊಗ್ಗ: ಸುಮಾರು ಎರಡು ತಿಂಗಳ ಹಿಂದೆ ಕುಮದ್ವತಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರ ಶವ ಸೋಮವಾರ ಪತ್ತೆಯಾಗಿದೆ.
ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಕುಂಸಿಯ ಅಮರನಾಥ್ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯ ಪ್ರವಾಹದ ವೇಳೆ ಚೊರಡಿ ಕುಮದ್ವತಿ ನದಿ ಸೇತುವೆ ಮೇಲೆ ನಿಂತು ನದಿಯನ್ನು ನೋಡುತ್ತಿದ್ದಾಗ ಬೋಲೇರೋ ಡಿಕ್ಕಿ ಹೊಡೆದು ಮೂವರು ನದಿಗೆ ಬಿದ್ದಿದ್ದರು. ನದಿಗೆ ಬಿದ್ದ ಮರುದಿನವೇ ರಾಮಪ್ಪ ಎಂಬುವರ ಶವಪತ್ತೆಯಾಗಿತ್ತು. ಹರೀಶ್ ಶವ ಇನ್ನೂ ಪತ್ತೆಯಾಗಿಲ್ಲ.
ಹರೀಶ್ ಹಾಗೂ ಅಮರನಾಥ್ ಶವಕ್ಕಾಗಿ ಎನ್ ಡಿಆರ್ ಎಫ್ ಹದಿನೈದು ದಿನ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಎನ್ ಡಿಆರ್ ಎಫ್ ಸಿಬ್ಬಂಧಿಗಳು ಕಾರ್ಯಾಚರಣೆ ನಿಲ್ಲಿಸಿದ್ದರು.
ಸೋಮವಾರ ಚೊರಡಿ ಸಮೀಪದ ದೊಡ್ಡಿಮಟ್ಟಿ ಬಳಿ ಕುಮದ್ವತಿ ನದಿಪಾತ್ರದಲ್ಲಿ ಸ್ಥಳೀಯ ರೈತರು ಕೊಳೆತ ಶವವಿರುವುದನ್ನು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವದ ಮೇಲಿರುವ ಜರ್ಕಿನ್, ಬಟ್ಟೆಗಳ ಆಧಾರದ ಮೇಲೆ ಅಮರನಾಥ್ ಶವ ಎಂದು ಗುರುತಿಸಿದ್ದಾರೆ.