ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧ ಸ್ಫೋಟಗೊಳ್ಳುವ ಸಂಭವನೀಯತೆಯನ್ನು ತಡೆಯುವಲ್ಲಿ ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೋ ಮಹತ್ತರ ಪಾತ್ರ ವಹಿಸಿದ್ದುದು ಇದೀಗ ಗೊತ್ತಾಗಿದೆ.
ಕಳೆದ ವಾರ ವಿಯೆಟ್ನಾಮ್ ನಲ್ಲಿ ಹೆನಾಯ್ ಶೃಂಗ ಸಭೆ ನಡೆಯುತ್ತಿದ್ದಾಗ ಭಾರತ – ಪಾಕ್ ಉದ್ವಿಗ್ನತೆಯು ಯುದ್ಧ ಸ್ಫೋಟದ ಮಟ್ಟಕ್ಕೆ ತಲುಪಿತ್ತು. ಆಗ ಅಮೆರಿಕ ವಿದೇಶ ಸಚಿವ ಮೈಕ್ ಪಾಂಪಿಯೋ ಅವರು ಉನ್ನತ ಮಟ್ಟದ ಖಾಸಗಿ ರಾಜತಾಂತ್ರಿಕ ಮಾತುಕತೆಯನ್ನು ಯಶಸ್ವಿಯಾಗಿ ನಡೆಸಿದ್ದರು.
ಈ ಮಾತುಕತೆಯಲ್ಲಿ ಭಾರತದ ವಿದೇಶ ಸಚಿವೆ ಸುಶ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಮತ್ತು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಭಾಗವಹಿಸಿದ್ದರು.
ಅಂತೆಯೇ ಪಾಂಪಿಯೋ ಸಲಹೆ ಪ್ರಕಾರ ಉಭಯ ದೇಶಗಳು ಸಮರ ಸ್ಫೋಟಕ್ಕೆ ಅವಕಾಶ ನೀಡದಂತೆ ಉದ್ವಿಗ್ನತೆಯ ಶಮನಕ್ಕೆ ಒಪ್ಪಿಕೊಂಡಿದ್ದವು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಉಪ ವಕ್ತಾರ ರಾಬರ್ಟ್ ಪೆಲಾಡಿನೋ ಹೇಳಿದರು.
ಇದೇ ವೇಳೆ ಭಾರತದ ವಿರುದ್ಧ ಸಂಭವನೀಯ ಸಮರ ಸ್ಫೋಟಕ್ಕೆ ಮುನ್ನ ಪಾಕಿಸ್ಥಾನದ ಸೇನೆ, ಅಮೆರಿಕ ಉಗ್ರ ನಿಗ್ರಹ ಉದ್ದೇಶಕ್ಕೆ ಮಾತ್ರವೇ ಬಳಸತಕ್ಕದ್ದೆಂಬ ಶರತ್ತಿನಲ್ಲಿ ಪೂರೈಸಿದ್ದ ಎಫ್ 16 ಫೈಟರ್ ಜೆಟ್‌ಗಳನ್ನು, ಭಾರತದ ವಿರುದ್ಧ ದುರ್ಬಳಕೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು ಆ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿರುವಾಗಿ ತಿಳಿದು ಬಂದಿದೆ.