ಗಜೇಂದ್ರಗಡ: ಮಕ್ಕಳಿಗೆ ಪೊಷಕರು ಹೆಚ್ಚಿನ ಅಂಕಗಳಿಕೆಯ ಒತ್ತಡ ಹೇರದೇ ಒತ್ತಡ ರಹಿತ ವಾತಾವರಣ ನಿರ್ಮಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯ ವಿಷಯ ಮನದಟ್ಟು ಮಾಡಿಕೊಂಡು ಅಭ್ಯಾಸದಲ್ಲಿ ತೊಡಗಿರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎನ್.ಎಚ್. ನಾಗೂರ ಹೇಳಿದರು.
ಪಟ್ಟಣದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಮಕ್ಕಳ ವಿದ್ಯಾಭ್ಯಾಸದ ಕ್ರಮ ಕುರಿತು ಪೋಷಕರೊಂದಿಗೆ ಚರ್ಚಿಸಿ ಅವರು ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಪಾಲಕರು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಬೇಕು. ಮಕ್ಕಳನ್ನು ನಿಮ್ಮ ಸ್ನೇಹಿತರಂತೆ ಕಂಡು ಅವರಲ್ಲಿಆತ್ಮಸ್ಥೈರ್ಯ ತುಂಬಬೇಕು. ಅಂದಾಗ ಮಾತ್ರ ಫಲಿತಾಂಶ ಸುಧಾರಣೆ ಕಾಣಲು ಸಾಧ್ಯ ಎಂದರು.
ಮಕ್ಕಳನ್ನು ಟಿ.ವಿ ಮತ್ತು ಮೊಬೈಲ್‌ಗಳಿಂದ ದೂರವಿರಸಿ ಅಭ್ಯಾಸಕ್ಕೆ ಒತ್ತು ನೀಡುವಂತೆ ಪ್ರೇರೇಪಿಸಬೇಕು. ಶಿಕ್ಷಣದ ಯಶಸ್ಸು, ಯೋಚನೆ, ಯೋಜನೆ ಮತ್ತು ಅನುಷ್ಠಾನ ತ್ರಿಸೂತ್ರದ ಮೇಲೆನಿಂತಿದೆ. ಕೇವಲ ವಿದ್ಯಾಭ್ಯಾಸಕ್ಕಿಂತ ಪಾಲಕರ ನೀತಿಪಾಠಗಳು ಮಕ್ಕಳು ಗುರಿ ತಲುಪಲುಸಹಕಾರಿಯಾಗಲಿವೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಚಿತ್ತಹರಿಸಿ ಅವರನ್ನು ದೇಶದ ಆಸ್ತಿಯನ್ನಾಗಿಸುವ ಜವಾಬ್ದಾರಿ ಪಾಲಕ ಹಾಗೂ ಶಿಕ್ಷಕರ ಮೇಲಿದೆ ಎಂದರು.
ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಓದಿನ ಮನೆ, ಮನೆ ಮನೆಗೆ ಭೇಟಿ ಕಾರ್ಯಾಗಾರದಂತಹ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಯಾವುದೇ ಒತ್ತಡ ಹೇರದೇ ಅವರನ್ನು ಕೇವಲ ಅಭ್ಯಾಸಕ್ಕೆ ಪ್ರೇರೇಪಿಸಿದಾಗ ಮಾತ್ರ ಹೆಚ್ಚು ಅಂಕ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಸರಕಾರಿ ಬಾಲಕರ ಪ್ರೌಢಶಾಲೆ, ಸರಕಾರಿ ಬಾಲಕಿಯರ ಪ್ರೌಢಶಾಲೆ ಸೇರಿ ವಿವಿಧ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ವಿದ್ಯಾಭ್ಯಾಸದ ಕುರಿತು ಪರಿಶೀಲನೆ ನಡೆಸಿದರು. ಮುಖ್ಯ ಶಿಕ್ಷಕ ಆರ್.ಎಲ್. ಶೆಟ್ಟರ, ಎಂ.ಎನ್. ಕಡಗದ, ಎಸ್.ಸಿ. ಬದಾಮಿ, ಆರ್.ಎಸ್. ಶೃಂಗಾರಪುರ, ಎಚ್.ವಿ. ಮಲಜಿ, ಝಡ್.ಯು. ಗೊಡೇಕಾರ ಸೇರಿ ಇದ್ದರು.