ಮೈಸೂರು: ಮೇಲಧಿಕಾರಿ ಅನಗತ್ಯವಾಗಿ ಮಾನಸಿಕ ಕಿರುಕುಳ ನೀಡುತ್ತಾ ಕರ್ತವ್ಯ ನಿರ್ವಹಿ ಸಲು ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ಆಹಾರ ಇಲಾಖೆ ಉಪ ನಿರ್ದೇಶಕರ ಕಚೇರಿ ಸಿಬ್ಬಂದಿ ಸೋಮವಾರ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರು ಕಳೆದ ಮೂರ್‍ನಾಲ್ಕು ವರ್ಷಗಳಿಂದ ಇಲಾಖೆಯ ನೌಕರರು, ಸಿಬ್ಬಂದಿಗೆ ಅನವಶ್ಯಕವಾಗಿ ಮಾನಸಿಕ ಒತ್ತಡ ಹೇರುತ್ತಿದ್ದು, ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಕಿರುಕುಳ ತಪ್ಪಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕವಾಗಿ ನೌಕರರ ತೇಜೋವಧೆ ಮಾಡುವುದು, ತಡರಾತ್ರಿಯಲ್ಲಿ ಪದೇ ಪದೇ ವಾಟ್ಸಪ್ ಸಂದೇಶ ಕಳುಹಿಸುವುದು, ಅನಗತ್ಯ ವಾಗಿ ಕಾರಣ ಕೇಳಿ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಕಚೇರಿ ಕೆಲಸದ ಮೇಲೆ ತಾಲೂಕುಗಳಿಂದ ಬರುವ ಸಿಬ್ಬಂದಿಯನ್ನು ಸಭೆ ಹೆಸರಿನಲ್ಲಿ ರಾತ್ರಿವರೆಗೂ ಕಾಯಿಸುವುದು, ನಂತರ ತಾಲೂಕುಗಳಿಗೆ ಭೇಟಿ ನೀಡಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ನೋಟಿಸ್ ನೀಡಿ ಕಿರುಕುಳ ನೀಡುತ್ತಾರೆ.
ಮಹಿಳಾ ನೌಕರರ ಮೇಲೂ ಈ ರೀತಿಯ ಮಾನಸಿಕ ಒತ್ತಡ ಹೇರುತ್ತಿರುವುದರಿಂದ ಅನ್ನಪೂರ್ಣ ಎಂಬ ಸಿಬ್ಬಂದಿ ವೈಯಕ್ತಿಕ ಕಾರಣ ನೀಡಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಜತೆಗೆ ಇನ್ನೂ ಇಬ್ಬರು ಮಹಿಳಾ ನೌಕರರು ಆತ್ಮಹತ್ಯೆಗೆ ಯತ್ನಿಸಿ,
ದೀರ್ಘರಜೆ ಮೇಲೆ ತೆರಳಿದ್ದಾರೆ ಎಂದು ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಕೆ.ರಾಮು ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಮೈಸೂರು ತಾಲೂಕು ಆಹಾರ ನಿರೀಕ್ಷಕರಾದ ವಿಜಯಲಕ್ಷಿ, ಮೈಸೂರು ನಗರ ಆಹಾರ ನಿರೀಕ್ಷಕರಾದ ಶ್ರೀಲಕ್ಷಿ ಮೊದಲಾದವರು ಕಾ.ರಾಮೇಶ್ವರಪ್ಪವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ಸಲ್ಲಿಸಿದರು.