ಹಾಸನ: ನಿಗದಿತ ಸಮಯದಲ್ಲಿ ವಿವಿಧ ಸರ್ಕಾರಿ ಸೇವೆ ಒದಗಿಸಲು ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಥರ್ಮಿಕ ಮತ್ತು ಪ್ರೌಢ ಶಿಕ್ಷಣ, ಕಾರ್ಮಿಕ ಹಾಗೂ ಸಕಾಲ ಯೋಜನೆ ಸಚಿವ ಆರ್.ಸುರೇಶ್ ಕುಮಾರ್ ಸೂಚಿಸಿದರು.
ಕರ್ನಾಟಕ ಸಕಾಲ ಸೇವೆಗಳ ಅಧಿ ನಿಯಮದ ಸಮರ್ಪಕ ಅನುಷ್ಠಾನ ಸಂಬಂಧ ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ, ಸಚಿವರು ಸಕಾಲ ಸೇವೆಗಳ ಕುರಿತಂತೆ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶನ ಫಲಕ ಹಾಕಿ ಜನರಿಗೆ ಹೆಚ್ಚಿನ ಸೇವೆ ಬಳಸಿಕೊಳ್ಳಲು ಅರಿವು ಮೂಡಿಸುವಂತೆ ತಾಕೀತು ಮಾಡಿದರು.
ವಿಳಂಬಕ್ಕೆ ಆಸ್ಪದ ಬೇಡ: ಸಕಾಲ ಉದ್ದೇಶ ಕುರಿತಂತೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ಏರ್ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಕಾಲ ಯೋಜನೆಯಡಿ ಇಲಾಖೆಗಳಲ್ಲಿ ಸ್ವೀಕೃತವಾದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ವಿಳಂಬಕ್ಕೆ ಆಸ್ಪದ ನೀಡದಂತೆ ಗಮನಹರಿಸಬೇಕು ಅಧಿಕಾರಿಗಳಿಗೆ ತಿಳಿಸಿದರು.
ಡೀಸಿಗಳಿಗೆ ಬಹುಮಾನ: ಸಕಾಲ ಯೋಜನೆಯನ್ನು ಇನ್ನಷ್ಟು ಸರಳೀಕರಣ ಮಾಡುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡುವ ಜಿಲ್ಲಾಧಿಕಾರಿಗೆ ಬಹುಮಾನ ನೀಡಲಾಗುವುದು. ಫೆಬ್ರವರಿ ಮೊದಲ ವಾರದಲ್ಲಿ ಪುನಃ ವಿಡಿಯೋ ಸಂವಾದ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಸಕಾಲ ಮಿಷನ್ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ವಿಶೇಷ ಆಸಕ್ತಿ ವಹಿಸಿ ಸೇವೆಗಳನ್ನು ಜನರಿಗೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿರ್ದೇಶನ: ಜಿಲ್ಲಾಧಿಕಾರಿ ವಿಡಿಯೋ ಸಂವಾದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಜ.22 ರೊಳಗೆ ಎಲ್ಲಾ ಇಲಾಖೆಗಳಲ್ಲಿ ಸಕಾಲ ಸೇವೆಗೆ ಸಂಬಂಧಿಸಿದಂತೆ ಪ್ರದರ್ಶನ ಫಲಕ ಅಳವಡಿಸುವಂತೆ ನಿರ್ದೇಶನ ನೀಡಿದರು. ವಿಡಿಯೋ ಸಂವಾದ ನಂತರ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್.ಗಿರೀಶ್, ವಿವಿಧ ಇಲಾಖೆಗಳಿಗೆ ಬರುವ ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸೆಪಟ್, ಜಿಪಂ ಸಿಇಒ ಬಿ.ಎ.ಪರಮೇಶ್, ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.
ಸಕಾಲದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಮುಜರಾಯಿ ಹಾಗೂ ಮೀನುಗಾರಿಕೆಯನ್ನೂ ಸಕಾಲ ಯೋಜನೆಯಡಿ ತರಲು ಚಿಂತನೆ ನಡೆದಿದೆ. ಜಿಲ್ಲಾಧಿಕಾರಿ ಅರ್ಜಿಗಳ ವಿಲೇವಾರಿಗೆ ಹೆಚ್ಚು ಒತ್ತು ನೀಡಿ ಪ್ರತಿ ತಿಂಗಳೂ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾಧ್ಯಮಗೋಷ್ಠಿಗಳ ಮೂಲಕ ಪ್ರಚಾರ ಮಾಡಬೇಕು.
-ಸುರೇಶ್‌ಕುಮಾರ್, ಸಚಿವ