ಸವಣೂರು: ನೇತ್ರದಾನದಿಂದ ಅಂಧರಿಗೆ ಕಣ್ಣು ಬರುವಂತಾದರೆ ಅದಕ್ಕಿಂತ ದೊಡ್ಡ ಸಾಮಾಜಿಕ ಕಾರ್ಯ ಮತ್ತೂಂದಿಲ್ಲ. ಇಂತಹ ಕಾರ್ಯಗಳಿಗೆ ಪ್ರೇರಣೆ ಅವಶ್ಯವಾಗಿದೆ. ಈ ಕುರಿತು ಸಾಮಾಜಿಕ ಕಾರ್ಯಕ್ಕೆ ಸವಣೂರ ಮಾಧ್ಯಮ ಮಿತ್ರರು ನೇತ್ರದಾನ ವಾಗ್ಧಾನ ಪ್ರೇರಣಾ ಕಾರ್ಯಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದರು.
ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ನಿಮಿತ್ತ ಹುಬ್ಬಳ್ಳಿ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕುವ ಮೂಲಕ ನೇತ್ರದಾನ ವಾಗ್ಧಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ತನ್ನ ಜೀವಿತಾನಂತರ ದೇಹದ ಅಂಗಾಂಗಗಳನ್ನು ದಾನ ಮಾಡುವುದು ಅತ್ಯಂತ ಮಹತ್ವದ ಕಾರ್ಯ. ಇದರಿಂದಾಗಿ ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿರುವ ಅದೆಷ್ಟೋ ಜನರಿಗೆ ಬದುಕು ಕಲ್ಪಿಸಿದಂತಾಗುತ್ತದೆ. ಇಂದು ನಾನೂ ಸಹ ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುತ್ತಿದ್ದೇನೆ ಎಂದರು.
ಪತ್ರಕರ್ತ ಆನಂದ ಮತ್ತಿಗಟ್ಟಿ ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕಿ ಇತರರಿಗೆ ಮಾದರಿಯಾಗುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ (ಪ್ರಭಾರ)ತಿಪ್ಪೆಸ್ವಾಮಿ, ತಹಸೀಲ್ದಾರ್ ವಿ.ಡಿ.ಸಜ್ಜನ್ ಅವರು ಸಹ ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕಿ ಮಾತನಾಡಿದರು. ಪತ್ರಕರ್ತರಾದ ಶಂಕ್ರಯ್ಯ ಹಿರೇಮಠ, ಅಶೋಕ ಕಳಲಕೊಂಡ, ಯೋಗೇಂದ್ರ ಜಂಬಗಿ, ರಾಜಶೇಖರಯ್ಯ ಗುರುಸ್ವಾಮಿಮಠ, ಗಣೇಶಗೌಡ ಪಾಟೀಲ, ಅಶೋಕ ಕಾಳಶೆಟ್ಟಿ ಹಾಗೂ ಇತರರಿದ್ದರು.