ಬೆಂಗಳೂರು: ದಾರಿಯಲ್ಲಿ ನಡೆದು ಹೋಗುತ್ತಿದ್ದವರ ಬಳಿ ಮೊಬೈಲ್ ಕಸಿದ ಪರಾರಿಯಾಗುತ್ತಿದ್ದ ದರೋಡೆ ಕೋರರ ತಂಡವನ್ನು ರಾತ್ರಿ ಗಸ್ತಿನಲ್ಲಿದ್ದ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಅವರ ನೇತೃತ್ವದ ಪೊಲೀಸರ ತಂಡ ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾಗಿರಿ ಲೇಔಟ್‌ನಲ್ಲಿ ಶನಿವಾರ ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದ್ದು, ಈ ಸಂಬಂಧ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಗೋವಿಂದರಾಜನಗರದ ಜ್ಞಾನದೇವ (20), ಯೋಗಿಶ್ (18) ಮತ್ತು ಮಾಗಡಿ ಮುಖ್ಯರಸ್ತೆಯ ಕೋಡಿಗೆಹಳ್ಳಿ ನಿವಾಸಿ ಯಶವಂತ್ (19) ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಇವರೊಂದಿಗಿದ್ದ ಅಭಿ ಮತ್ತು ಶ್ರೀನಿವಾಸ್ ಎಂಬುವರು ಪರಾರಿಯಾಗಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ ಎಂದು ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.
ಏನಿದು ಘಟನೆ?: ಚಂದ್ರಾ ಲೇಔಟ್ ಮುಖ್ಯರಸ್ತೆಯಲ್ಲಿ ವ್ಯಕ್ತಿಗಳಿಬ್ಬರು ಭಾನುವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಸಾಗುತ್ತದ ದರೋಡೆಗೆ ಹೊಂಚು ಹಾಕುತ್ತಿದ್ದ ಆರು ಮಂದಿಯ ತಂಡ ಅವರ ಬಳಿ ಕಾರು ನಿಲ್ಲಿಸಿದೆ. ಬಳಿಕ ವಿಳಾಸ ಕೇಳುವ ನೆಪದಲ್ಲಿ ಆ ಇಬ್ಬರನ್ನು ಮಾತನಾಡಿಸಿ ಅವರ ಬಳಿಯಿದ್ದ ಮೊಬೈಲ್ ಕಸಿದಿದ್ದಾರೆ.
ಅದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ವಿಜಯನಗರ ಎಸಿಪಿ ವೇಣುಗೋಪಾಲ್ ಅವರ ಕಾರು ಅಲ್ಲಿಗೆ ಬರುತ್ತಿರುವುದನ್ನು ನೋಡಿದ ಆರೋಪಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ. ಈ ವೇಳೆ ಎಸಿಪಿ ಕಾರು ಆರೋಪಿಗಳ ಕಾರನ್ನು ಬೆನ್ನಟ್ಟಿದೆ. ಅದೇ ವೇಳೆ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಅವರೂ ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದು, ಅವರಿಗೂ ವಿಷಯ ತಿಳಿದು ತಮ್ಮ ವಾಹನದಲ್ಲಿ ಆರೋಪಿಗಳ ಕಾರನ್ನು ಬೆನ್ನಟ್ಟಿದ್ದಾರೆ.
ಚಂದ್ರಾಲೇಔಟ್ ಸುತ್ತಮುತ್ತ ನಾಲ್ಕೈದು ಕಿ.ಮೀ ಓಡಾಡಿದ ಆರೋಪಿಗಳು ವಿದ್ಯಾಗಿರಿ ಲೇಔಟ್‌ನಲ್ಲಿ ಬರುತ್ತಿದ್ದಂತೆ ಅವರ ಕಾರನ್ನು ಅಡ್ಡ ಹಾಕಿದ ಡಿಸಿಪಿ ಅನುಚೇತ್ ಹಾಗೂ ಅವರೊಂದಿಗಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮತ್ತಿಬ್ಬರು ಪರಾರಿಯಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾರು ತಪಾಸಣೆ ನಡೆಸಿದಾಗ ಅದರಲ್ಲಿ ಮಾರಕಾಸ್ತ್ರಗಳು, ಖಾರದಪುಡಿ ಇತ್ತು ಎಂದು ಅಧಿಕಾರಿ ಹೇಳಿದ್ದಾರೆ. ಈ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಆರು ಮಂದಿ ಇದ್ದ ದರೋಡೆಕೋರರ ತಂಡ ದಾರಿಯಲ್ಲಿ ನಡೆದು ಹೋಗುತ್ತಿದ್ದವರ ಬಳಿ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಎಸಿಪಿ ಮತ್ತು ನಾವು ಕಾರಿನಲ್ಲಿ ಆರೋಪಿಗಳ ಕಾರನ್ನು ಬೆನ್ನಟ್ಟಿ ಬಂಧಿಸಿದ್ದೇವೆ.
-ಎಂ.ಎನ್. ಅನುಚೇತ್, ಡಿಸಿಪಿ