ಶಿರಾ: ಉಪ ಚುನಾವಣೆ ಎದುರಿಸುತ್ತಿರುವ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಅನಿರೀಕ್ಷಿತವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ನೀಲಕಂಠಾಪುರಕ್ಕೆ ಭೇಟಿ ನೀಡಿ ಅಲ್ಲಿನ ಮಾಜಿ ಸಚಿವ ಹಾಗೂ ಆಂಧ್ರದ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ರಘುವೀರಾ ರೆಡ್ಡಿ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಡಿಸಿಎಂ ಬರುತ್ತಿದ್ದಂತೆಯೇ ಆತ್ಮೀಯವಾಗಿ ಬರಮಾಡಿಕೊಂಡ ರೆಡ್ಡಿ, ಪ್ರೀತಿಯಿಂದ ಸತ್ಕರಿಸಿ ಗೌರವಿಸಿದರು. ಬಳಿಕ ಇಬ್ಬರೇ ಸುದೀರ್ಘ ಮಾತುಕತೆ ನಡೆಸಿದರಲ್ಲದೆ, ಈ ಸಂದರ್ಭದಲ್ಲಿ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಡಾ.ಅಶ್ವತ್ಥನಾರಾಯಣ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ರೆಡ್ಡಿ ನಗುಮೊಗದಿಂದಲೇ ಪ್ರತಿಕ್ರಿಯಿಸಿದರು. ಉಭಯ ಕುಶಲೋಪರಿಯ ಜತೆಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜಕೀಯ ಪರಿಸ್ಥತಿಗಳ ಬಗ್ಗೆಯೂ ಅವರು ಮಾತನಾಡಿಕೊಂಡರು.
ತಮ್ಮ ಗ್ರಾಮದಲ್ಲಿ ರೆಡ್ಡಿ ಅವರು ಶ್ರೀ ಅಯ್ಯಪ್ಪ ಸ್ವಾಮಿ, ಪಂಚಮುಖಿ ಗಣಪತಿ, ಆಂಜನೇಯ ಸ್ವಾಮಿ ದೇಗುಲಗಳನ್ನು ನಿರ್ಮಾಣ ಮಾಡಿಸುತ್ತಿದ್ದು, ಆ ದೇವಾಲಯಗಳಿಗೆ ಡಿಸಿಎಂ ಅವರನ್ನು ಕರೆದುಕೊಂಡು ಹೋಗಿ ಮಾಹಿತಿ ನೀಡಿದರು. ಕರ್ನಾಟಕಕ್ಕೆ ಸೇರಿದ ಬಿಜೆಪಿ ನಾಯಕರೊಬ್ಬರು ಅದರಲ್ಲೂ ಕಟ್ಟರ್ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಗಡಿ ದಾಟಿ ಬಂದ ಕ್ಷಣಗಳನ್ನು ನೀಲಕಂಠಾಪುರದ ಜನರು ಆಶ್ಚರ್ಯಚಕಿತರಾಗಿ ಗಮನಿಸಿದರು. ಇಡೀ ಊರಿನ ಜನ ಡಿಸಿಎಂ ಬೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಡಾ.ಅಶ್ವತ್ಥನಾರಾಯಣ ಅವರು ಮಧ್ಯಾಹ್ನದ ಭೋಜನವನ್ನು ರೆಡ್ಡಿ ಅವರ ನಿವಾಸದಲ್ಲಿಯೇ ಸೇವಿಸಿದರು.
ರಘುವೀರಾ ರೆಡ್ಡಿ ಅವರು ಆಂಧ್ರ ಪ್ರದೇಶದ ವರ್ಚಸ್ವಿ ನಾಯಕರಾಗಿದ್ದು, ಯಾದವ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಅವರನ್ನು ನಮ್ಮ ರಾಜ್ಯದ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ರಾಜ್ಯದ ಜನ ಒತ್ತಡ ಹೇರಿದ್ದರು. ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಅತ್ಯಂತ ಪ್ರಭಾವಿ ಆಗಿರುವ ಅವರು, ಶಿರಾ ಮತ್ತು ಮಧುಗಿರಿ ಮುಂತಾದ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ.