Advertisement

ಭೂಮಿಯ ಹತ್ತಿರಕ್ಕೆ ಬಂದ ಗುರು-ಶನಿ ಗ್ರಹಗಳನ್ನು ವೀಕ್ಷಿಸಿದ ಡಿಸಿಎಂ

09:03 PM Dec 21, 2020 | mahesh |

ಬೆಂಗಳೂರು: ಖಗೋಳ ವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವಾದ ಗುರು ಮತ್ತು ಶನಿ ಗ್ರಹಗಳೆರಡು 400 ವರ್ಷಗಳ ನಂತರ ಇದೇ ಮೊದಲ ಬಾರಿ ಭೂಮಿಗೆ ಅತ್ಯಂತ ಸಮೀಪಕ್ಕೆ ಬಂದ ದೃಶ್ಯವನ್ನು ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ವೀಕ್ಷಿಸಿ ಕಣ್ತುಂಬಿಕೊಂಡರು.

Advertisement

ಸೋಮವಾರ ಸಂಜೆ 6.45 ಗಂಟೆ ಹೊತ್ತಿಗೆ ನಗರದ ಜವಾಹರಲಾಲ್‌ ನೆಹರು ತಾರಾಲಯಕ್ಕೆ ಭೇಟಿ ನೀಡಿದ ಅವರು, ಅತ್ಯಾಧುನಿಕ ಟೆಲಿಸ್ಕೋಪ್ ಮೂಲಕ ಗುರು-ಶನಿ ಗ್ರಹಗಳ ಮಹಾ ಸಮಾಗಮದ ದೃಶ್ಯವನ್ನು ವೀಕ್ಷಿಸಿ ಚಕಿತರಾದರು.

ಈ ಸಂದರ್ಭದಲ್ಲಿ ತಾರಾಲಯದ ಬಳಿ ನೆರೆದಿದ್ದ ವಿಜ್ಞಾನಾಸಕ್ತರು ಹಾಗೂ ವಿದ್ಯಾರ್ಥಿಗಳ ಜತೆಯಲ್ಲಿ ಎರಡೂ ಗ್ರಹಗಳನ್ನು ವೀಕ್ಷಿಸಿ ಸಂಭ್ರಮಿಸಿದ ಅವರು, ಇಂಥ ಅಪರೂಪದ ದೃಶ್ಯವನ್ನು ನೋಡಲು ಸಾಧ್ಯವಾಗಿದ್ದಕ್ಕೆ ಧನ್ಯತೆಯ ಭಾವ ವ್ಯಕ್ತಪಡಿಸಿದರು. ಬಳಿಕ ತಾರಾಲಯದ ವಿಜ್ಞಾನಿಗಳ ಜತೆ ಮಾತನಾಡಿದರಲ್ಲದೆ. ಅಲ್ಲಿನ ಅಕಾಶ ಮಂದಿರ, ಏಮ್ಸ್ ರೂಮ್ ಮತ್ತು ಪ್ರತಿಗುರುತ್ವ ಕೊಠಡಿಗೆ ತೆರಳಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಖಗೋಳ ವಿಜ್ಞಾನಿಗಳು ಇದನ್ನು ʼಮಹಾ ಸಂಯೋಗʼ ಎಂದು ಕರೆದಿದ್ದು, ವಿಜ್ಞಾನದ ಸಹಾಯದಿಂದ ಇದೆಲ್ಲವನ್ನು ನಾವು ನೋಡಲು ಸಾಧ್ಯವಾಗಿದೆ. ಇಂತಹ ವಿದ್ಯಮಾನ ಮತ್ತೆ ಘಟಿಸುವುದು 20 ವರ್ಷಗಳ ನಂತರ ಎಂದು ನಾಸಾ ಹೇಳಿದೆ. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ನಮ್ಮ ಸೌರವ್ಯೂಹದ ಎರಡು ಬೃಹತ್‌ ಗ್ರಹಗಳನ್ನು ಭೂಮಿಗೆ ಹತ್ತಿರ ಬಂದಾಗ ವೀಕ್ಷಿಸಲು ಸಾಧ್ಯವಾಗಿದ್ದು ಜೀವನದಲ್ಲಿ ಮರೆಯಲಾಗದ ಆವಿಸ್ಮರಣೀಯ ಘಟನೆ ಎಂದರು ಡಿಸಿಎಂ.

ಜಗತ್ತಿನಾದ್ಯಂತ ಈ ಖಗೋಳ ಕೌತುಕವನ್ನು ಎಲ್ಲರೂ ನೋಡಿದ್ದಾರೆ. ನಮ್ಮ ಬೆಂಗಳೂರಿನಲ್ಲೂ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಖಗೋಳದ ಇನ್ನಷ್ಟು ಅಧ್ಯಯನಕ್ಕೆ ಗುರು-ಶನಿ ಗ್ರಹಗಳ ಈ ಮಹಾ ಸಂಗಮ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Advertisement

ನೆಹರು ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ, ಆಡಳಿಧಿಕಾರಿ ರಾಜನ್ ಸೇರಿದಂತೆ ಇತರ ವಿಜ್ಞಾನಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next