Advertisement

ವಸತಿ ಶಾಲೆಗಳಲ್ಲಿ ಏ.1ರಂದೇ ಪಠ್ಯ ಪುಸ್ತಕಗಳ ವಿತರಣೆಗೆ ಡಿಸಿಎಂ ಸೂಚನೆ

10:07 AM Dec 12, 2019 | Team Udayavani |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಶಾಲೆ ಪ್ರಾರಂಭವಾದ ದಿನದಂದೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

Advertisement

ಬೆಂಗಳೂರಿನಲ್ಲಿ ಇಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 72 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ 2019-20 ನೇ ಸಾಲಿನಲ್ಲಿ 999 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದ್ದು, 863 ಕೋಟಿ ರೂ. ನಿರ್ವಹಣೆ ಗೆ ಹಾಗೂ ಉಳಿದ 135 ಕೋಟಿ ರೂ ಅನುದಾನವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ.

ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿಯನ್ನು ನೀಡಬೇಕು. ಈಗಾಗಲೇ ನೇಮಕಾತಿ‌ ಪ್ರಕ್ರಿಯೆಯಲ್ಲಿರುವ 3067 ಬೋದಕ ಹಾಗೂ ಬೋದಕೇತರ ಸಿಬ್ಬಂದಿ ವರ್ಗದ ವರಿಗೆ ಶೀಘ್ರವಾಗಿ ನೇಮಕಾತಿ ಆದೇಶ ನೀಡಬೇಕು. ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳ ಕಟ್ಟಡಗಳನ್ನು ಹೆಚ್ಚಾಗಿ ನಿರ್ಮಿಸಿ ಕೊರತೆಯನ್ನು ನೀಗಿಸಬೇಕು.

ಕಟ್ಟಡಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯಿಂದ ಪರಿಶೀಲಿಸಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು. ಇಲಾಖೆ ವ್ಯಾಪ್ತಿಯ 68 ಪದವಿ ಪೂರ್ವ ಕಾಲೇಜುಗಳಲ್ಲಿ 3843 ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆಮಾಡಿಕೊಂಡಿದ್ದಾರೆ‌. ಇವರಿಗೆ ಪರೀಕ್ಷೆ ಸಿದ್ದತೆಗೆ ಅನುಕೂಲವಾಗುವಂತೆ ರಜೆ ಅವಧಿಯಲ್ಲಿ ವಿಶೇಷ ತರಬೇತಿ ನೀಡಬೇಕು. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ವ್ಯಾಸಂಗಕ್ಕೆ ಅಗತ್ಯ ಪೂರಕ ಪಠ್ಯ ಪುಸ್ತಕಗಳನ್ನು ನೀಡಬೇಕು. ಎಲ್ಲಾ ಶಾಲಾ ಕಾಲೇಜುಗಳ ಕಟ್ಟಡಗಳ ಆವರಣದಲ್ಲಿ ಸಸಿ ಬೆಳೆಸಲು ಅರಣ್ಯ ಇಲಾಖೆಯ ಸಹಕಾರ ಪಡೆಯಬೇಕು.

ಶಾಲಾ ಶೈಕ್ಷಣಿಕ ಹಾಗೂ ವಿಚಾರ ಪ್ರದರ್ಶನಗಳಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟಕ್ಕೆ ಆಯ್ಕಯಾದ ವಿದ್ಯಾರ್ಥಿಗಳಿಗೆ ಬಹುಮಾನದೊಂದಿಗೆ ಅಭಿನಂದಿಸಿ ಉತ್ತೇಜನ ನೀಡಲಾಗುವುದು. 6, 7, ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳು ಭೇಟಿಗೆ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಶೈಕ್ಷಣಿಕ ಮಾಸ ಪತ್ರಿಕೆ ಹಾಗೂ ವೆಬ್ ಸೈಟ್ ರೂಪಿಸಬೇಕು.

Advertisement

ಯಾವುದೇ ಪೂರ್ವಾನುಮತಿ ಇಲ್ಲದೇ ಹೆಚ್ಚುವರಿ ಕಟ್ಟಡ ಕಾಮಗಾರಿಗಳನ್ನು ನಿರ್ಮಿಸಬಾರದು. ಅಂದಾಜು ವೆಚ್ವಕ್ಕೆ ಸೀಮಿತವಾಗಿರಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಎಸ್ ಸಿಪಿ ಮತ್ತು ಟಿಎಸ್ಪಿ ಕಾರ್ಯಕ್ರಮಗಳ ಸಲಹೆಗಾರ ರಾದ ಶ್ರೀ ವೆಂಕಟಯ್ಯ,ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕುಮಾರ ನಾಯಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹಮದ್ ಮೊಹಿಉದ್ಧೀನ್, ಆಯುಕ್ತ ಶ್ರೀ ಪೆದ್ದಪ್ಪಯ್ಯ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್, ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಘವೇಂದ್ರ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀ ಸಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next