ವಿಜಯಪುರ: ಈ.ಕ.ರಾ.ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ 18-44 ವರ್ಷ ವಯೋಮಾನದ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನಗರದಲ್ಲಿ ಚಾಲನೆ ನೀಡಿದರು.
ಶನಿವಾರ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕೋವಿಡ್ ಸಾಂಕ್ರಾಮಿಕ ರೋಗದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ:ಗ್ರಾಮೀಣ ಪ್ರದೇಶದ ಕೋವಿಡ್ ಸೋಂಕಿತರಿಗೆ ತ್ವರಿತ ಚಿಕಿತ್ಸೆ ನೀಡಿ: ಡಿಸಿಎಂ ಕಾರಜೋಳ
ಈಕರಸಾ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣನಪ್ಪ ಕುರುಬರ ಮಾತನಾಡಿ, ನಮ್ಮ ವಿಭಾಗದ ಸಿಬ್ಬಂದಿಗೆ ಲಸಿಕೆ ಹಾಕುವ ಕಾರ್ಯಾಕ್ರಮಕ್ಕೆ ಇದೀಗ ಚಾಲನೆ ನೀಡಿದ್ದು, ಸಂಸ್ಥೆ ಸಿಬ್ಬಂದಿ ಮುಂಚೂಣಿಯಲ್ಲಿ ಸಾರಿಗೆ ಸೇವೆಯ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮೊದಲ ಆದ್ಯತೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ಮಾಡಲಾಗಿದೆ. ಸಂಸ್ಥೆಯ ಎಲ್ಲ ಸಿಬ್ಬಂದಿ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಹಾಕಿಸಿಕೊಳ್ಳುವ ಹಾಗೂ ಸುರಕ್ಷಿತ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ 1031 ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಪಿ.ಸುನಿಲ ಕುಮಾರ, ಜಿ.ಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ್ ಅಗರವಾಲ್, ಎಡಿಸಿ ರಮೇಶ ಕಳಸದ, ಡಿಎಚ್ಒ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಆರ್.ಸಿ .ಹೆಚ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ, ಡಾ.ಲಕ್ಕಣ್ಣವರ್, ಡಾ.ಗಲಗಲಿ, ಡಾ.ಎಂ.ಬಿ.ಬಿರಾದಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.