Advertisement

Bangalore Rural Lok Sabha constituency; ಡಿಸಿಎಂ, ಮಾಜಿ ಮುಖ್ಯಮಂತ್ರಿಯ ಪ್ರತಿಷ್ಠೆಯ ಕಣ

11:34 PM Mar 16, 2024 | Team Udayavani |

ರಾಮನಗರ: ಒಂದೆಡೆ ನಾಲ್ಕನೇ ಬಾರಿ ಗೆಲುವಿನ ಕನಸು ಕಾಣುತ್ತಿರುವ ಉಪಮುಖ್ಯಮಂತ್ರಿ ಸಹೋದರ ಡಿ.ಕೆ. ಸುರೇಶ್‌, ಮತ್ತೊಂದೆಡೆ ಹೊಸದಾಗಿ ರಾಜಕೀಯಕ್ಕೆ ಪ್ರವೇಶಿಸಿರುವ ಮಾಜಿ ಪ್ರಧಾನಿ ಅಳಿಯ ಡಾ| ಮಂಜುನಾಥ್‌. ಇಬ್ಬರು ದಿಗ್ಗಜರ ಸ್ಪರ್ಧೆಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹೈವೋಲ್ಟೆàಜ್‌ ಅಖಾಡವಾಗಿ ಮಾರ್ಪಟ್ಟಿದೆ.

Advertisement

ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವದ ಪಟ್ಟಕ್ಕಾಗಿ ಹೋರಾಡುತ್ತಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾಲಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಪುತ್ರನ ಸೋಲಿಗೆ ಕಾರಣ ವಾದ ಡಿ.ಕೆ.ಸುರೇಶ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕ ದಳಪತಿಗಳದ್ದಾದರೆ, ಈ ಕ್ಷೇತ್ರದಲ್ಲಿ ಗೆದ್ದು ಎನ್‌ಡಿಎ ಮೈತ್ರಿಕೂಟಕ್ಕೆ ಟಾಂಗ್‌ ನೀಡುವ ಮೂಲಕ ತನ್ನ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳುವ ತವಕ ಡಿಕೆಎಸ್‌ ಸಹೋದರರದ್ದಾಗಿದೆ. ಹೀಗಾಗಿ ಗ್ರಾಮಾಂತರದಲ್ಲಿ ಚುನಾವಣ ಕಾವು ತುಸು ಜೋರಾಗಿಯೇ ಇದೆ.

ಕ್ಷೇತ್ರ ಪರಿಚಯ
1967ರಲ್ಲಿ ರಚನೆಯಾದ ಕನಕಪುರ ಲೋಕಸಭಾ ಕ್ಷೇತ್ರ 2008ರ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿ ಬಲದಾಗಿದ್ದು, ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಕುಣಿಗಲ್‌, ರಾಜರಾಜೇಶ್ವರಿ, ಬೆಂಗಳೂರು ದಕ್ಷಿಣ, ಆನೇಕಲ್‌ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕನಕಪುರ ಕ್ಷೇತ್ರ ವಿದ್ದಾಗಿನಿಂದ ರಾಜಕೀಯವಾಗಿ ಸಾಕಷ್ಟು ಪ್ರಾಮುಖ್ಯ ಪಡೆದಿದ್ದು, ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಕೇಂದ್ರ ಸಚಿವರಾದ ಸಿ.ಕೆ.ಜಾಫರ್‌ ಷರೀಪ್‌, ಎಂ.ವಿ.ರಾಜಶೇಖರನ್‌, ಚಂದ್ರಶೇಖರ್‌ ಮೂರ್ತಿ, ಎಚ್‌.ಡಿ.ಕುಮಾರಸ್ವಾಮಿಯಂತಹ ಘಟಾನುಘಟಿ ರಾಜಕಾರಣಿಗಳು ರಾಜಕೀಯ ಭವಿಷ್ಯ ಕಂಡು ಕೊಂಡಿದ್ದಾರೆ.

ಬಲಾಬಲ
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಎರಡರಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್‌ 2 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಮಾಜಿ ಎಂಎಲ್‌ಸಿ ಅಶ್ವತ್ಥ್ನಾರಾಯಣ ಗೌಡ ಅವರನ್ನು ಸೋಲಿಸಿದ್ದರು.

ಜಾತಿ ಲೆಕ್ಕಾಚಾರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತದಾರರಿದ್ದಾರೆ. ಉಳಿದಂತೆ 3.50 ಲಕ್ಷ ದಲಿತ ಮತದಾರರು, 2 ಲಕ್ಷ ಮುಸ್ಲಿಮರು, 1.50 ಲಕ್ಷ ಲಿಂಗಾಯತರು, ಜತೆಗೆ ಇತರ ಸಮುದಾಯದವರೂ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ಆಧಾರದಲ್ಲಿ ಚನ್ನಪಟ್ಟಣ ಹೊರತುಪಡಿಸಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪ್ರಮುಖ ಪಕ್ಷಗಳಾಗಿದ್ದರೆ, ಚನ್ನಪಟ್ಟಣದಲ್ಲಿ ಜೆಡಿಎಸ್‌-ಬಿಜೆಪಿ ಪ್ರಮುಖ ಪಕ್ಷಗಳಾಗಿವೆ. ಇನ್ನು ರಾಜರಾಜೇಶ್ವರಿ, ಬೆಂಗಳೂರು ದಕ್ಷಿಣ, ಆನೇಕಲ್‌ನಲ್ಲಿ ಬಿಜೆಪಿ-ಕಾಂಗ್ರೆಸ್‌ ಪ್ರಬಲ ಪಕ್ಷಗಳಾಗಿವೆ. ಒಂದೆಡೆ ಡಿಸಿಎಂ ತಮ್ಮ ಮತ್ತೂಂದೆಡೆ ಮಾಜಿ ಪ್ರಧಾನಿಗಳ ಅಳಿಯ ಸ್ಪರ್ಧೆಗಿಳಿಯುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಮತದಾರ ಯಾರಿಗೆ ಆಶೀರ್ವದಿಸುತ್ತಾನೆ ಎಂದು ಕಾಯ್ದು ನೋಡಬೇಕಿದೆ.

Advertisement

ಕಳೆದ ಬಾರಿಯ ಫಲಿತಾಂಶ
ವಿಜೇತ ಅಭ್ಯರ್ಥಿ : ಡಿ.ಕೆ.ಸುರೇಶ್‌ ( ಕಾಂಗ್ರೆಸ್‌)
ಪಡೆದ ಮತ: 8,77,712
ಗೆಲುವಿನ ಅಂತರ: 2,07,229

ಮತದಾರರ ವಿವರ 2019         2024
ಮಹಿಳೆಯರು: 12,09,276         13,37,507
ಪುರುಷರು : 1287524                 13,88,731
ಇತರ :341                                     321
ಒಟ್ಟು: 24,97,141                      27,26,559

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next