ಕಲಬುರಗಿ: ಪ್ರಧಾನಿ ಮೋದಿ ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಕೈ ಹಿಡಿದು ಅವರ ಪರ ಮತಯಾಸಿದ್ದಕ್ಕೆ ನಾವು ಪೆನ್‌ಡ್ರೈವ್ ವಿಚಾರದಲ್ಲಿ ಪಿಎಂಗೆ ಪ್ರಶ್ನೆ ಮಾಡುತ್ತಿದ್ದೇವೆ. ಪೆನ್‌ಡ್ರೈವ್ ವಿಚಾರದಲ್ಲಿ ಪ್ರಧಾನಿಯನ್ನು ಏಕೆ ಎಳೆದು ತರುತ್ತೀರಿ ಎನ್ನುವ ಕುಮಾರಸ್ವಾಮಿ ಇದನ್ನು ಅರಿತುಕೊಳ್ಳಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್ ಸಂವಿಧಾನದ ಹುದ್ದೆಯಲ್ಲಿದ್ದವರು. ಬೇರೆ ವಿಚಾರಗಳಲ್ಲಿ ವಾಗ್ಧಾಳಿ ಮಾಡುತ್ತಿದ್ದವರು ಈ ಪ್ರಕರಣದಲ್ಲಿ ಏಕೆ ಮಾತನಾಡುತ್ತಿಲ್ಲ. ಏಕೆ ಬಂಧಿಸಲಿಲ್ಲವೆಂದರೆ ಹೇಗೆ? ಮೊದಲು ತಮ್ಮ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ಶೋಭಕ್ಕ, ಸಿ.ಟಿ.ರವಿ, ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರನ್ನು ಕರೆದುಕೊಂಡು ಹೋಗಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ. ಮಹಿಳೆಯರ ಬಗ್ಗೆ ಗೌರವ ಇದೆ ಎನ್ನುವ ಕುಮಾರಸ್ವಾಮಿ ಹಾಗೂ ದೇವೇಗೌಡರು ಕೂಡ ಸಂತ್ರಸ್ತರ ಮನೆಗೆ ಹೋಗಿ ಧೈರ್ಯ ತುಂಬಲಿ. ಆರ್.ಅಶೋಕ್, ಪ್ರಜ್ವಲ್ ನಮ್ಮ ಬೆಂಬಲದಲ್ಲಿ ಗೆದ್ದ ಸಂಸದ ಎಂದಿದ್ದಾರೆ. ಹೌದು, ಅವರು ನಮ್ಮ ಬೆಂಬಲದಲ್ಲಿ ಗೆದ್ದ ಸಂಸದ. ಹೀಗಾಗಿ ನಾವು ಪ್ರಶ್ನೆ ಮಾಡುತ್ತಿದ್ದೇವೆ. ಈಗ ನಿಮ್ಮ ಬೆಂಬಲದೊಂದಿಗೆ ಅಭ್ಯರ್ಥಿಯಾಗಿದ್ದಾರಲ್ಲ, ನೀವೇಕೆ ಮೌನವಾಗಿದ್ದೀರಿ ಎಂದರು.
ಕಾರ್ತಿಕ್‌ನನ್ನು ವಿದೇಶಕ್ಕೆ ಕಳುಹಿಸಲು ನನಗೇನು ತಲೆ ಕೆಟ್ಟಿದೆಯಾ?: ಡಿಕೆಶಿ
ಕಲಬುರಗಿ: ಕಾರ್ತಿಕ್ ಅವರನ್ನು ಮಲೇಷ್ಯಾದಲ್ಲಿ ಇಟ್ಟವರು ಯಾರು ಎಂಬುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಕೇಳಿ ಮಾಹಿತಿ ಪಡೆಯಲಿ. ಅವರನ್ನು ವಿದೇಶಕ್ಕೆ ಕಳುಹಿಸಲು ನನಗೆ ತಲೆ ಕೆಟ್ಟಿದೆಯಾ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೇರವಾಗಿ ಹೋರಾಟ ಮಾಡುತ್ತೇನೆ. ಯಾರನ್ನೋ ತೋಟದಲ್ಲಿ ಬಚ್ಚಿಟ್ಟು ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಅವರಿಗೆ ಆ ಅವಶ್ಯಕತೆ ಇದೆ. ಬಿಜೆಪಿ ನಾಯಕರಿಗೆ ಪೆನ್‌ಡ್ರೈವ್ ನೀಡಿರುವುದಾಗಿ ಆ ಹುಡುಗ ಹೇಳಿದ್ದಾನೆ. ಪೆನ್‌ಡ್ರೈವ್ ಯಾರು ಬಿಟ್ಟಿದ್ದಾರೆ ಎಂಬುದನ್ನು ಮುಂದೆ ಚರ್ಚೆ ಮಾಡೋಣ. ಈಗ ವಿಚಾರ ವಿಷಯಾಂತರ ಮಾಡುವುದು ಬೇಡ ಎಂದರು.