Advertisement

ಜನರ ಸ್ಯಾಂಪಲ್‌ಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಿಸಲ್ಟ್‌ ನೀಡಿ : ಡಾ.ಅಶ್ವತ್ಥನಾರಾಯಣ

05:32 PM Apr 21, 2021 | Team Udayavani |

ಬೆಂಗಳೂರು: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬುಧವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನಗರರದ ವಿವಿಧ ಲ್ಯಾಬ್ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬಳಿಕ ಮಾತಾನಾಡಿದ ಅವರು, ಜನರ ಸ್ಯಾಂಪಲ್‌ಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಿಸಲ್ಟ್‌ ಕೊಡಬೇಕು ಎಂದು ಅವುಗಳಿಗೆ ತಾಕೀತು ಮಾಡಿದರು. ಬೆಳಗ್ಗೆಯಿಂದಲೇ ಮಲ್ಲೇಶ್ವರದ ಕೆ.ಸಿ ಜನರಲ್‌ ಆಸ್ಪತ್ರೆ, ರಾಜಾಜಿನಗರದ ಇಎಸ್‌ಐ, ಲೈಫ್‌ಸೆಲ್ ಲ್ಯಾಬ್‌, ವಿಕ್ಟೋರಿಯಾ ಹಾಗೂ ಕಿದ್ವಾಯಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅವರು; ಅಲ್ಲಿನ ಕೋವಿಡ್‌ ವ್ಯವಸ್ಥೆ, ಚಿಕಿತ್ಸೆ, ಲ್ಯಾಬ್‌, ಲಸಿಕೆ ನೀಡಿಕೆ ಇತ್ಯಾದಿ ಅಂಶಗಳನ್ನು ಪರಿಶೀಲನೆ ನಡೆಸಿದರು.

ಪ್ರತಿ ದಿನವೂ ಲ್ಯಾಬ್‌ಗಳಿಗೆ ಕನಿಷ್ಠ 3 ಬ್ಯಾಚ್‌ಗಳಲ್ಲಿ ಸ್ಯಾಂಪಲ್‌ ಕಳಿಸಬೇಕು ಹಾಗೂ ಆ ಸ್ಯಾಂಪಲ್‌ ಸ್ವೀಕರಿಸಿದ 24  ಗಂಟೆಯೊಳಗೆ ಲ್ಯಾಬ್‌ಗಳು ರಿಸಲ್ಟ್‌ ಕೊಡಬೇಕು ಎಂದು ಡಿಸಿಎಂ ಅವರು, ಆಸ್ಪತ್ರೆಗಳ ಹಿರಿಯ ವೈದ್ಯಾಧಿಕಾರಿಗಳು, ಆಡಳಿತ ವರ್ಗದವರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಒಂದು ಕಡೆ ನಿರಂತರವಾಗಿ ಗಂಟಲು ದ್ರವ ಇತ್ಯಾದಿ ಕಲೆಕ್ಟ್ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿ 3 ಗಂಟೆಗೊಮ್ಮೆ ಲ್ಯಾಬ್‌ಗಳು ರಿಸಲ್ಟ್‌ ಕೊಡುತ್ತಿರಲೇಬೇಕು. ಸ್ಯಾಂಪಲ್‌ ಕೊಟ್ಟ 24 ಗಂಟೆಯೊಳಗೆ ಫಲಿತಾಂಶ ಸಿಕ್ಕರೆ ಸೋಂಕಿಗೆ ಒಳಗಾದವರು ತಕ್ಷಣವೇ ಚಿಕಿತ್ಸೆ ಪಡೆಯಬಹುದು. ಆಗ ಜೀವಕ್ಕೆ ಹಾನಿಯಾಗುವವುದಿಲ್ಲ ಎಂದು ಡಿಸಿಎಂ ಅವರೆಲ್ಲರಿಗೂ ಮನವರಿಕೆ ಮಾಡಿಕೊಟ್ಟರು.

ಕೆ.ಸಿ.ಜನರಲ್‌ʼನಲ್ಲಿ ಆಕ್ಸಿಜನ್‌ ಕೊರತೆ ಇಲ್ಲ:

Advertisement

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಕೋವಿಡ್‌ ಮೆಡಿಕಲ್‌ ಕಿಟ್‌ ಪೂರೈಕೆಯಲ್ಲಿ ಕೊರತೆ ಇದೆ. ಖರೀದಿಯಲ್ಲಿ ಕೊಂಚ ಏರುಪೇರಾಗಿದೆ. ಅದೆಲ್ಲವನ್ನೂ ಸರಿಪಡಿಸಲಾಗುತ್ತದೆ ಎಂದ ಅವರು; ಇಲ್ಲಿ ಆಮ್ಲಜನಕ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಆಸ್ಪತ್ರೆಯಲ್ಲಿ ದಿನಕ್ಕೆ ಐದಾರು ಬ್ಯಾಚ್‌ನಲ್ಲಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳಿಸಲಾಗುತ್ತದೆ ಎಂದು ವೈದ್ಯರು ಡಿಸಿಎಂಗೆ ಮಾಹಿತಿ ನೀಡಿದರು. ಇನ್ನೂ ಹೆಚ್ಚು ಬ್ಯಾಚ್‌ಗಳಲ್ಲಿ ಸ್ಯಾಂಪಲ್‌ ಅನ್ನು ಲ್ಯಾಬ್‌ಗೆ ಕಳಿಸಿ ಎಂದು ಡಿಸಿಎಂ ಸೂಚಿಸಿದರು.

ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ 8 ಸಾವಿರ ಲೀಟರ್ ಸಾಮರ್ಥ್ಯದ ಆ್ಯಕ್ಸಿಜನ್ ಪ್ಲಾಂಟ್ ಇದೆ. ನಿತ್ಯವೂ 4 ಸಾವಿರ ಲೀಟರ್‌ ಬಳಕೆ ಆಗುತ್ತಿದೆ ಎಂದು ಡಿಸಿಎಂಗೆ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ.ವೆಂಕಟೇಶಯ್ಯ ಮಾಹಿತಿ ನೀಡಿದರು.

ಸೋಂಕು ಬಂದಾಗ ಜನರು ನಿರ್ದಿಷ್ಟ ಆಸ್ಪತ್ರೆಯೇ ಬೇಕು ಅಂತ ಹುಡುಕಬಾರದು. ಕೆ.ಸಿ ಜನರಲ್‌ನಲ್ಲಿ 120 ವೆಂಟಿಲೇಟರ್ ಇದೆ. 450 ಬೆಡ್‌ಗಳಿವೆ, ಅದರಲ್ಲಿ 180ಕ್ಕೂ ಹೆಚ್ಚು ಹಾಸಿಗೆಗಳನ್ನು ಕೋವಿಡ್ʼಗೆ ಮೀಸಲಿಡಲಾಗಿದೆ. ಇನ್ನೂ 100 ಬೆಡ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

 ಲೈಫ್‌ಸೆಲ್‌ಗೆ 3 ಬ್ಯಾಚ್‌ ಸ್ಯಾಂಪಲ್‌:

ಈವರೆಗೆ ದಿನಕ್ಕೆ ಒಮ್ಮೆ ಮಾತ್ರ ಕೋವಿಡ್‌ ಸ್ಯಾಂಪಲ್‌ ಸ್ವೀಕರಿಸುತ್ತಿದ್ದ ರಾಜಾಜಿನಗರದ ಲೈಫ್ ಸೆಲ್ ಲ್ಯಾಬ್, ಈಗ 3  ಬ್ಯಾಚ್‌ಗಳಲ್ಲಿ ಸ್ಯಾಂಪಲ್‌ ಕಳಿಸಿದರೂ ಪರೀಕ್ಷೆ ಮಾಡಿ ರಿಸಲ್ಟ್‌ ಕೊಡಲು ಮುಂದೆ ಬಂದಿದೆ.

ಡಿಸಿಎಂ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಯೋಗಾಲಯದ ತಜ್ಞರು ಈ ಭರವಸೆ ನೀಡಿದರು. ಇಂದಿನಿಂದಲೇ 3 ಬ್ಯಾಚ್‌ ಸ್ಯಾಂಪಲ್‌ ಸ್ವೀಕರಿಸಲು ಆಸ್ಪತ್ರೆ ಸಿದ್ಧವಾಗಿದ್ದು, ಈವರೆಗೆ ಲ್ಯಾಬಿಗೆ ಸ್ಯಾಂಪಲ್‌ ಹೋದ ಮೇಲೆ ರಿಸಲ್ಟ್‌ ಬರುವುದು 48ರಿಂದ 70 ಗಂಟೆ ಆಗುತ್ತಿತ್ತು. ಈ ವಿಳಂಬದಿಂದ ರೋಗವೂ ಉಲ್ಬಣವಾಗುತ್ತಿತ್ತಲ್ಲದೆ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತಿತ್ತು. ಬೇಗ ರಿಸಲ್ಟ್‌, ಬೇಗ ಚಿಕಿತ್ಸೆ ಪಡದರೆ ಜೀವಕ್ಕೆ ಹಾನಿಯಾಗದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಇದನ್ನೂ ಓದಿ : 15 ದಿನಗಳ ನಂತ್ರ ಮುಷ್ಕರ ಕೈ ಬಿಟ್ಟ ಸಾರಿಗೆ ನೌಕರರು

ಇಎಸ್‌ಐನಲ್ಲಿ ಹಾಸಿಗೆ ಕೊರತೆ ಇಲ್ಲ:

ರಾಜಾಜಿನಗರದ ಎಎಸ್‌ಐ ಆಸ್ಪತ್ರೆಯಲ್ಲಿ 420 ಹಾಸಿಗೆಗಳಿದ್ದು, ಅವುಗಳಲ್ಲಿ ಕೋವಿಡ್‌ ಸೋಂಕಿತರಿಗೆ 120 ಬೆಡ್‌ ಮೀಸಲಿಡಲಾಗಿದೆ. ಇನ್ನೂ 60 ಬೆಡ್  ಮೀಸಲು ಇಡಲು ಸೂಚಿಸಲಾಯಿತು. ಅಲ್ಲಿಗೆ ಆರ್‌ಎನ್‌ಎ ಎಕ್ಸ್‌ಟ್ರ್ಯಾಕ್‌ ಮಿಷನ್‌ ಹಾಗೂ ವೆಂಟಿಲೇಟರ್‌ಗೆ ಅಳವಡಿಸಲಾಗುವ ಯೂಮಿಡಿಫಯರ್‌ ಯಂತ್ರದ ಅಗತ್ಯ ಇದ್ದು, ಅವುಗಳನ್ನು ಶೀಘ್ರವೇ ಒದಗಿಸಲಾಗುವುದು. ಜತೆಗೆ, ಡಾಟಾ ಎಂಟ್ರಿ ಮಾಡುವ ಸಿಬ್ಬಂದಿ ಹಾಗೂ ಲ್ಯಾಬ್‌ ಟೆಕ್ನಿಷಿಯನ್‌ಗಳ ಕೊರತೆ ಇದ್ದು ಕೂಡಲೇ ಪಾಲಿಕೆ ವತಿಯಿಂದ ಒದಗಿಸಲು ಡಿಸಿಎಂ ಸೂಚಿಸಿದರು.

ಯಾವುದೇ ತುರ್ತು ಸಂದರ್ಭದಲ್ಲಿ ಕೋವಿಡ್‌ ಸಹಾಯವಾಣಿ 1912 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದ ಅವರು, ಎಲ್ಲ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನೇಷನ್, ಹಾಸಿಗೆಗಳ ಪ್ರಮಾಣ, ಆ್ಯಕ್ಸಿಜನ್ ಸೇರಿ ಮುಂತಾದ ಸಿದ್ಧತೆಗಳನ್ನು ಪರಿಶೀಲಿಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750 ಹಾಸಿಗೆ :

ಈ ಆಸ್ಪತ್ರೆಯಲ್ಲಿ 750 ಹಾಸಿಗೆಗಳುಳ್ಳ ಕೋವಿಡ್‌ ಆಸ್ಪತ್ರೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 350 ಬೆಡ್‌ಗಳ ಆಸ್ಪತ್ರೆ ಇದ್ದು, ಉಳಿದ 400 ಹಾಸಿಗೆಗಳನ್ನು ದಿನಕ್ಕೆ 50 ಬೆಡ್‌ನಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತಿದೆ. ಈಗಾಗಲೇ ಇಲ್ಲಿ 50 ವೆಂಟಿಲೇಟರ್‌ಗಳಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಪರೀಕ್ಷೆ ಮಾಡಿಸಿಕೊಳ್ಳಲು ಮನವಿ:

ಬಹಳ ಜನರಿಗೆ ಕೋವಿಡ್‌ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಕೆಮ್ಮು ಶೀತ, ನೆಗಡಿಯಂಥ ರೋಗ ಲಕ್ಷಣಗಳಿದ್ದವರು ತಪ್ಪದೇ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಳಂಬ ಮಾಡಬಾರದು ಎಂದು ಡಿಸಿಎಂ ಮನವಿ ಮಾಡಿದರು.

ಎಲ್ಲ ಚಿತಾಗಾರಗಳಲ್ಲಿ ಕೋವಿಡ್‌ ಮೃತರ ಅಂತ್ಯಕ್ರಿಯೆ:

ಆಸ್ಪತ್ರೆಗಳಿಗೆ ಭೇಟಿ ಆರಂಭಿಸಿದ ವೇಳೆ ಕೆ.ಸಿ.ಜನರಲ್‌ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಬೆಳಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಜತೆ ಮಾತುಕತೆ ನಡೆಸಿದೆ. ಕೆಲ ಆಯ್ದ ಚಿತಾಗಾರಗಳಲ್ಲಿ ಮಾತ್ರ ಕೋವಿಡ್‌ ಮೃತರ ಅಂತ್ಯಕ್ರಿಯೆ ನಡೆಸುತ್ತಿದ್ದ ಕಾರಣಕ್ಕೆ ನಗರದಲ್ಲಿ ಅಂತ್ಯ ಸಂಸ್ಕಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ” ಎಂದರು.

ಇಂದಿನಿಂದ ನಗರದ ಎಲ್ಲ 13 ಚಿತಾಗಾರಗಳಲ್ಲೂ ಕೋವಿಡ್‌ ಮೃತರ ಅಂತ್ಯಕ್ರಿಯೆ ನಡೆಸಲು ಗುಪ್ತ ಅವರ ಜತೆ ನಡೆಸಿದ ಮಾತುಕತೆ ವೇಳೆ ನಿರ್ಧರಿಸಲಾಯಿತು. ಇನ್ನು ಈ ಸಮಸ್ಯೆ ಉಂಟಾಗುವುದಿಲ್ಲ. ಮೃತರ ಗೌರವಯುತ ಅಂತ್ಯಕ್ರಿಯೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next