Advertisement

ಬಜೆಟ್‌ ಪೂರ್ವಭಾವಿ ಸಭೆ, ಹೆಚ್ಚಿನ ಅನುದಾನಕ್ಕೆ ಬೇಡಿಕೆ: ಡಾ. ಅಶ್ವತ್ಥನಾರಾಯಣ

10:08 AM Feb 04, 2020 | sudhir |

ಬೆಂಗಳೂರು: ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆ. ಅದಕ್ಕಾಗಿಯೇ ಈ ಬಜೆಟ್‌ನಲ್ಲಿ 4500 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಸೋಮವಾರ ತಿಳಿಸಿದ್ದಾರೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ 2020-21ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಾ. ಅಶ್ವತ್ಥನಾರಯಣ ಅವರು, ಉನ್ನತ ಶಿಕ್ಷಣ, ವಿಜ್ಞಾನ ತಂತ್ರಜ್ಞಾನ, ಐಟಿ-ಬಿಟಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಯೋಜನೆಗಳಿಗೆ ಹೆಚ್ಚು ಅನುದಾನ ಕೋರಿರುವುದಾಗಿ ತಿಳಿಸಿದರು.

“ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸುವುದು ಪ್ರಮುಖ ವಿಚಾರ, ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವ ಜತೆಗೆ ಹೊಸದಾಗಿ ಪ್ರಾರಂಭವಾಗಿರುವ ವಿಶ್ವವಿದ್ಯಾಲಯಗಳು ಸುಧಾರಣೆಗೆ ಒತ್ತು ನೀಡಬೇಕು. ಕಾಲೇಜು ಶಿಕ್ಷಣಕ್ಕೆ 1463 ಕೋಟಿ ರೂ., ತಾಂತ್ರಿಕ ಶಿಕ್ಷಣಕ್ಕೆ 369 ಕೋಟಿ, ಬೆಂಗಳೂರು ಕೇಂದ್ರ ವಿವಿ ಹಾಗೂ ಉತ್ತರ ವಿವಿಗೆ ತಲಾ 500 ಕೋಟಿ ರೂ. ಸಂಸ್ಕೃತ ವಿವಿಗೆ 300 ಕೋಟಿ ರೂ., ರಾಣಿ ಚೆನ್ನಮ್ಮ ವಿವಿಗೆ 500 ಕೋಟಿ ರೂ. ಸೇರಿದಂತೆ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಒಟ್ಟು 3800 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೋಮಾ ಕಾಲೇಜು ಹಾಗೂ ಹೊಸ ಎಂಜಿನಿಯರಿಂಗ್‌ ಕಾಲೇಜುಗಳ ಸುಧಾರಣೆಗೆ ಬಹಳಷ್ಟು ಹಣ ಬೇಕಿರುವುದರಿಂದ ಒಟ್ಟಾರೆ 4500 ಕೋಟಿ ರೂ. ಅನುದಾನ ಕೇಳಲಾಗಿದೆ,” ಎಂದು ವಿವರಿಸಿದರು.

ಐಟಿ-ಬಿಟಿ
“ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಒಲವು ತೋರಿರುವ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಅನುದಾನ ಹೆಚ್ಚಿಸಲು ಆಸಕ್ತಿ ತೋರಿದ್ದಾರೆ. ಈಗಿನ 120 ಕೋಟಿ ರೂ.ಗಿಂತ ಮೂರು ಪಟ್ಟು ಹೆಚ್ಚು ಅಂದ್ರೆ 342 ಕೋಟಿ ರೂ. ಅನುದಾನ ಕೇಳಿದ್ದೇವೆ. ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ , ಇನ್ನೋವೇಷನ್‌ ಸೆಂಟರ್‌, ಟ್ಯಾಲೆಂಟ್‌ ಆಕ್ಸಿಲರೇಟರ್‌, ಆಗ್ರೋ ಇನ್ನೋವೇಶನ್‌ ಸೆಂಟರ್‌ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಹೆಚ್ಚಿನ ಹಣದ ಅಗತ್ಯ ಇದೆ,”ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ವಿಜ್ಞಾನ ತಂತ್ರಜ್ಞಾನ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಯಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲು 188.4 ಕೋಟಿ ರೂ. ಬೇಡಿಕೆ ಇಟ್ಟಿದ್ದೇವೆ. ನಾಲ್ಡೆಜ್‌ ಸಿಟಿ, ರಾಜ್ಯ ಸಂಶೋಧನಾ ನಿಧಿ, ವಿಜ್ಞಾನ ಪ್ರತಿಭೆಗಳ ಗುರುತಿಸಲು ಕಾರ್ಯಕ್ರಮ ರೂಪಿಸಲು ಉದ್ದೇಶಿಸಿದ್ದೇವೆ,” ಎಂದು ಸಚಿವರು ತಿಳಿಸಿದರು.

Advertisement

ವೈದ್ಯ ಶಿಕ್ಷಣ
ಹೊಸ ವೈದ್ಯಕೀಯ ಕಾಲೇಜುಗಳ ಬೇಡಿಕೆ ಕೇಳಿ ಬರುತ್ತಲೇ ಇದ್ದು, ಸಮಗ್ರ ಅಭಿವೃದ್ಧಿಗೆ 1500 ಕೋಟಿ ರೂ. ಬೇಡಿಕೆ ಇಟ್ಟಿದ್ದೇವೆ. ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸುವ ಉದ್ದೇಶ ಇದೆ. ಕೆಸಿ ಜನರಲ್‌ ಆಸ್ಪತ್ರೆ ಸೇರಿದಂತೆ ಹಲವು ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸುವ ಗುರಿ ಇದೆ. ಇದಲ್ಲದೇ, ಎಲ್ಲ ಮೆಡಿಕಲ್‌ ಕಾಲೇಜುಗಳಲ್ಲಿ ಸಿಮಿಲೇಷನ್‌ ಲ್ಯಾಬ್‌ ಸ್ಥಾಪಿಸಲು ಅಗತ್ಯ ನೆರವು ಕೋರಲಾಗಿದೆ. ನಮ್ಮ ಎಲ್ಲ ಮೆಡಿಕಲ್‌ ಕಾಲೇಜುಗಳಿಗೆ ರಾಷ್ಟ್ರೀಯ ಪ್ರಯೋಗಾಲಯ ಮಾನ್ಯತಾ ಮಂಡಳಿ (ಎನ್‌ಎಬಿಎಲ್), ರಾಷ್ಟ್ರೀಯ ಆಸ್ಪತ್ರೆಯ ಮಾನ್ಯತಾ ಮಂಡಳಿ (ಎನ್‌ಎಬಿಹೆಚ್) ಮಾನ್ಯತೆ ಪಡೆಯುವ ಸಂಬಂಧ 300 ಕೋಟಿ ರೂ. ಬೇಡಿಕೆ ಮುಂದಿಡಲಾಗಿದೆ,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next