Advertisement

ರಾಮನಗರ, ಚನ್ನಪಟ್ಟಣ ನಗರಸಭೆ ಚುನಾವಣೆ : ಜಿಲ್ಲಾ ಮುಖಂಡರ ಜತೆ ಡಿಸಿಎಂ ಅಶ್ವತ್ಥನಾರಾಯಣ ಸಭೆ

09:38 PM Apr 17, 2021 | Team Udayavani |

ಬೆಂಗಳೂರು: ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ವಿಧಾನಪರಿಷತ್‌ ಸದಸ್ಯರ ಜತೆ ನಗರದಲ್ಲಿ ಶನಿವಾರ ಸಮಾಲೋಚನೆ ನಡೆಸಿದರು.

Advertisement

ಇದುವರೆಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಪಿಮುಷ್ಠಿಯಲ್ಲಿದ್ದ ಎರಡು ನಗರಸಭೆಗಳನ್ನು ಈ ಬಾರಿ ಬಿಜೆಪಿ ಗೆಲ್ಲಲೇಬೇಕು. ಮಂಗಳವಾರದಿಂದಲೇ ಎರಡೂ ಕಡೆ ವ್ಯವಸ್ಥಿತವಾಗಿ ಪ್ರಚಾರ ನಡೆಸಬೇಕು. ಎಲ್ಲರೂ ಒಗ್ಗಟ್ಟಾಗಿ ಮನೆಮನೆಗೂ ತೆರಳಿ ಮತಯಾಚನೆ ಮಾಡಬೇಕು ಎಂದು ಅವರು ಮುಖಂಡರಿಗೆ ನಿರ್ದೇಶನ ನೀಡಿದರು.

ಬೆಂಗಳೂರಿಗೆ ಅತಿ ಹತ್ತಿರದಲ್ಲಿದ್ದರೂ ರಾಮನಗರ ಈಗಲೂ ದೊಡ್ಡ ಹಳ್ಳಿಯಂತೆ ಕಾಣುತ್ತದೆ. ಹೇಳಿಕೊಳ್ಳುವಂಥ ಒಂದು ರಸ್ತೆ ಇಲ್ಲ, ಸಮರ್ಪಕ ಮೂಲಸೌಕರ್ಯಗಳಿಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ಸುಸಜ್ಜಿತ ಬಸ್‌ ನಿಲ್ದಾಣವಿಲ್ಲ, ನಾವು ಅಧಿಕಾರಕ್ಕೆ ಬರುವ ತನಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಒಂದೇ ಒಂದು ವೆಂಟಿಲೇಟರ್‌ ಇರಲಿಲ್ಲ. ಜನರು ಅನಾರೋಗ್ಯವಾದರೆ ಬೆಂಗಳೂರಿಗೆ ಓಡಿ ಹೋಗುವ ಪರಿಸ್ಥಿತಿ ಇತ್ತು. ಈ ಎಲ್ಲ ಅಂಶಗಳನ್ನು ಜನರಿಗೆ ಮನದಟ್ಟು ಮಾಡಬೇಕು, ಅವರನ್ನು ಒಲಿಸಿಕೊಳ್ಳಬೇಕು ಎಂದು ಡಾ.ಅಶ್ವತ್ಥನಾರಾಯಣ ಸಲಹೆ ನೀಡಿದರು.

ರಾಮನಗರದ ಜನ ಉದ್ಯೋಗ ಬೇಕೆಂದರೆ ಬೆಂಗಳೂರಿಗೇ ಬರಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರಕಾರಗಳು ವಿಫಲವಾಗಿವೆ. ಜಿಲ್ಲೆಯಿಂದ ಗೆದ್ದುಹೋಗಿ ಅಧಿಕಾರ ಅನುಭವಿಸಿದವರು ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮುಖಂಡರಿಗೆ ಅವರು ಸಲಹೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಅ.ದೇವೇಗೌಡ, ಪುಟ್ಟಣ್ಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಹುಲವಾಡಿ ನಾಗರಾಜ್‌, ಸಂಘಟನಾ ಕಾರ್ಯದರ್ಶಿ ಕಾಂತರಾಜು, ಕೇಶವ ಪ್ರಸಾದ್‌ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next