ಹೊಸದಿಲ್ಲಿ: ದೇಶದಲ್ಲಿ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ 5-12 ವರ್ಷ ವಯೋಮಿತಿಯ ಮಕ್ಕಳಿಗೆ ಕೊರ್ಬೊವ್ಯಾಕ್ಸ್ ನೀಡಬಹುದು ಎಂದು ಭಾರತೀಯ ಔಷಧ ನಿಯಂತ್ರಕರ (ಡಿಸಿಜಿಐ) ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಶಿಫಾರಸು ಮಾಡಿದೆ.
ಆದರೆ ಲಸಿಕೆಯನ್ನು ನೀಡಬೇಕಾಗಿದ್ದರೆ ಔಷಧ ನಿಯಂತ್ರಕರ ಅನುಮೋದನೆ ಬೇಕಾಗುತ್ತದೆ. ದೇಶದಲ್ಲಿ ಸದ್ಯ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.
ಇನ್ನೊಂದು ಆತಂಕಕಾರಿ ವಿಚಾರದಲ್ಲಿ ದಿಲ್ಲಿಯಲ್ಲಿ ಸೋಂಕು ಹೆಚ್ಚಾಗಲು ಒಮಿಕ್ರಾನ್ ರೂಪಾಂತರಿಯ ಉಪ ತಳಿ ಬಿಎ.2.12 ಕಾರಣ ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ. ಇನ್ಸಾಕಾಗ್‌ನ ಮಾಹಿತಿ ಪ್ರಕಾರ ದಿಲ್ಲಿಯ ಕೆಲವು ಮಾದರಿಗಳಲ್ಲಿ ಬಿಎ.2.12.1 ರೂಪಾಂತರಿಯೂ ಪತ್ತೆಯಾಗಿದೆ. ಆದರೆ, ಸರಕಾರದ ವತಿಯಿಂದ ಈ ಅಂಶಗಳು ಇನ್ನೂ ಖಚಿತವಾಗಬೇಕಷ್ಟೇ.
2 ಸಾವಿರಕ್ಕಿಂತ ಹೆಚ್ಚು: ಇದೇ ವೇಳೆ ಬುಧವಾರದಿಂದ ಗುರುವಾರದ ಅವಧಿಯಲ್ಲಿ ದೇಶದಲ್ಲಿ 2,380 ಹೊಸ ಪ್ರಕರಣಗಳು ದೃಢಪಟ್ಟಿವೆ. ಜತೆಗೆ 54 ಮಂದಿ ಅಸುನೀಗಿದ್ದಾರೆ. ಸತತ 2ನೇ ದಿನ ಸೋಂಕು ಸಂಖ್ಯೆ 2000ಕ್ಕಿಂತ ಹೆಚ್ಚಾಗಿದೆ. ಚೇತರಿಕೆ ಪ್ರಮಾಣ ಶೇ.98.76ಕ್ಕೆ ಏರಿಕೆಯಾಗಿದೆ. ಸಕ್ರಿಯ ಸೋಂಕು ಸಂಖ್ಯೆ 13,433ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಮತ್ತೂಂದೆಡೆ ಐಐಟಿ ಮದ್ರಾಸ್‌ನಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಮಾಸ್ಕ್ ಕಡ್ಡಾಯ: ದಿಲ್ಲಿಯ ಬಳಿಕ ಈಗ ಪಂಜಾಬ್‌ನಲ್ಲಿ ಕೂಡ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಬುಧವಾರ 30 ಹೊಸ ಕೇಸ್‌ಗಳು ದೃಢಪಟ್ಟಿವೆ.