Advertisement

ಡಿಸಿಎಫ್ ಮಣಿಕಂಠನ್‌ ಕರ್ತವ್ಯ ನಿಷ್ಠೆ ಸಿಬ್ಬಂದಿಗೆ ಮಾದರಿ

11:42 AM Sep 12, 2018 | |

ಮೈಸೂರು: ಕಳೆದ ವರ್ಷ ಕರ್ತವ್ಯ ನಿರ್ವಹಣೆಯಲ್ಲಿದ್ದು ಆನೆ ದಾಳಿಗೆ ಬಲಿಯಾದ ಡಿಸಿಎಫ್ ಎಸ್‌.ಮಣಿಕಂಠನ್‌ ಕರ್ತವ್ಯ ನಿಷ್ಠೆ ಹಾಗೂ ಸಮರ್ಪಣಾ ಮನೋಭಾವ ಇಲಾಖೆಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹುಲಿ ಮತ್ತು ಆನೆ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಜಗತ್‌ರಾಮ್‌ ಹೇಳಿದರು. 

Advertisement

ನಗರದ ಅಶೋಕಪುರಂ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಕಾಡಿಗೆ ಬೆಂಕಿ ಬಿದ್ದಿದ್ದ ವೇಳೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಮಣಿಕಂಠನ್‌ರಂತಹ ದಕ್ಷ ಅಧಿಕಾರಿಗಳ ಸೇವೆ ಇಂದಿನ ಸಮಾಜ ಮತ್ತು ಇಲಾಖೆಗೆ ಅಗತ್ಯ. ಹಲವು ಸವಾಲುಗಳನ್ನು ಎದುರಿಸಿ ವನ್ಯಸಂಪತ್ತಿನ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು. 

ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮ ಬದುಕನ್ನೇ ಮುಡುಪಾಗಿಟ್ಟು ಕಳ್ಳ ಸಾಗಾಣಿಕೆದಾರರು, ಮರಗಳ್ಳರು, ದಂತ ಚೋರರೊಂದಿಗೆ ಹೋರಾಡಿ ನೈಸರ್ಗಿಕ ಸಂಪತ್ತನ್ನು ಉಳಿಸಲು ಅನೇಕರು ತಮ್ಮ ಜೀವವನ್ನು ತ್ಯಾಗ ಮಾಡಿದ ನೌಕರರನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಬೇಕಿದೆ. ಹುತಾತ್ಮರ ಕುಟುಂಬಕ್ಕೆ ನೆರವಾಗಲು ಅರಣ್ಯ ಹುತಾತ್ಮರ ದಿನಾಚರಣೆ ಸಮಿತಿ ಸ್ಥಾಪಿಸಲಾಗಿದೆ.

ಈ ಸಮಿತಿಗೆ ವಿವಿಧ ವೃತ್ತಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಹೀಗೆ ಸಂಗ್ರಹವಾಗುವ ನಿಧಿಯನ್ನು ಹುತಾತ್ಮರ, ಅವಲಂಬಿತರ ಏಳಿಗೆಗೆ ಹಾಗೂ ಹುತಾತ್ಮರ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ನೀಡಲು ಬಳಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಪೆರೇಡ್‌ ಕಮಾಂಡರ್‌ ಅವರಿಂದ ವಂದನೆ ಸಲ್ಲಿಸಲಾಯಿತು.

ಬಳಿಕ ಕಳೆದ 51 ವರ್ಷದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದ 44 ಸಿಬ್ಬಂದಿ ನಾಮವಾಚನ ನಡೆಯಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸೇವೆ, ಪಡೆದ ಪ್ರಶಸ್ತಿ ಇನ್ನಿತರ ಸಾಧನೆಗಳನ್ನು ಸ್ಮರಿಸಲಾಯಿತು. ಪೊಲೀಸ್‌ ವೃಂದದವರು ವಾಲಿ ಫೈರಿಂಗ್‌ ನಡೆಸಿ ಹುತಾತ್ಮಕರಿಗೆ ಗೌರವ ಸಲ್ಲಿಸಿದರು. ಬಳಿಕ ಮೌನಾಚರಣೆ ನಡೆಯಿತು. 

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಎಸ್‌. ವೆಂಕಟೇಶನ್‌, ಉಪ ಅರಣ್ಯ ಸಂರಕ್ಷಣಾಕಾರಿಗಳಾದ ಡಾ.ಕೆ.ಟಿ. ಹನುಮಂತಪ್ಪ, ಸಿದ್ದರಾಮಪ್ಪ ಚಳಾRಪುರೆ, ಭಾನು ಪ್ರಕಾಶ್‌, ಶ್ರೀಧರ್‌, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next