Advertisement

ಮನೆಬಾಗಿಲಿಗೆ ಡಿಸಿಸಿ ಬ್ಯಾಂಕ್‌ ಸಾಲ

11:53 AM Sep 11, 2019 | Suhan S |

ಕೋಲಾರ: ಡಿಸಿಸಿ ಬ್ಯಾಂಕಿನಿಂದ ಪ್ರತಿ ಮನೆಗೂ ಸಾಲ ತಲುಪಿಸಿ ಮೀಟರ್‌ ಬಡ್ಡಿ ದಂಧೆ ವಿರುದ್ಧ ಬೃಹತ್‌ ಆಂದೋಲನ ಕೈಗೊಳ್ಳುವ ಅಗತ್ಯವಿದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಜಯನಗರದ ಸಫಲಮ್ಮ ದೇವಾಲಯದ ಆವರಣದಲ್ಲಿ ಮಂಗಳವಾರ ಬ್ಯಾಂಕಿನಿಂದ 14 ಮಹಿಳಾ ಸಂಘಗಳಿಗೆ 56 ಲಕ್ಷ ರೂ.ಗಳ ಸಾಲದ ಚೆಕ್ಕನ್ನು ಅರಿಶಿನ, ಕುಂಕುಮ, ಹೂ, ತಾಂಬೂಲದೊಂದಿಗೆ ವಿತರಿಸಿ ಮಾತನಾಡಿದರು.

ಆರ್ಥಿಕ ವ್ಯವಸ್ಥೆ ಸುಧಾರಿಸಿ, ಸಾಲ ವಿತರಣೆ: ತಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಪಾತಾಳ ತಲುಪಿದ್ದ ಬ್ಯಾಂಕಿನ ಆರ್ಥಿಕ ವ್ಯವಸ್ಥೆ ಸುಧಾರಿಸಿ, ಸಾವಿರ ಕೋಟಿ ರೂ. ಸಾಲವನ್ನು ರೈತರು, ಮಹಿಳೆಯರಿಗೆ ನೀಡಲಾಗಿದೆ. ಆದರೆ ಕೆಲವರು ನನ್ನ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ನನ್ನ ವಿರುದ್ಧ ಟೀಕೆ ಮಾಡುವವರ ಬಗ್ಗೆ ಮಾತನಾಡುವುದಿಲ್ಲ. ದೇವರು ಹಾಗೂ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿ, ಬ್ಯಾಂಕನ್ನು ಉಳಿಸಿರುವ ಬಡವರು, ತಾಯಂದಿರನ್ನು ನಂಬಿದ್ದೇನೆ ಎಂದರು.

ಪಕ್ಷ, ಜಾತಿ, ಧರ್ಮ ನೋಡಿಲ್ಲ, ತಾಯಂದಿರನ್ನು ನಂಬಿ ಸಾಲ ನೀಡುತ್ತಿದ್ದೇವೆ. ಈ ಬ್ಯಾಂಕನ್ನು ಕಟ್ಟಿದವರು ಹೆಣ್ಣು ಮಕ್ಕಳೇ, ನೀವು ನಿಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಮಾಡಿ ಮತ್ತಷ್ಟು ತಾಯಂದಿರಿಗೆ ಸಾಲ ಸಿಗಲು ನೆರವಾಗಬೇಕು. ತಾಯಂದಿರು ದಲ್ಲಾಳಿಗಳ ವಂಚನೆಗೆ ಬಲಿಯಾಗಬಾರದು ಎಂಬ ಉದ್ದೇಶದಿಂದ ಸಾಲವನ್ನು ಬಹಿರಂಗವಾಗಿ ನೀಡಲಾಗುತ್ತಿದೆ. ನೀವು ಯಾರಿಗೂ ಲಂಚ, ಕಮಿಷನ್‌ ಕೊಡಬೇಡಿ. ನೇರವಾಗಿ ಬ್ಯಾಂಕಿನೊಂದಿಗೆ ವ್ಯವಹರಿಸಿ. ಲಂಚ ನೀಡಿದ್ದರೆ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

ಬ್ಯಾಂಕಿನ ಇತಿಹಾಸ ಅರಿತು ಮಾತಾಡಲಿ: ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್ಕುಮಾರ್‌ ಮಾತನಾಡಿ, ಆಡಳಿತ ಮಂಡಳಿ ವಿರುದ್ಧ ಮಾತನಾಡುವವರು ಬ್ಯಾಂಕ್‌ ಇತಿಹಾಸ ಅರಿತುಕೊಳ್ಳಬೇಕು. ಏಳು ವರ್ಷಗಳ ಹಿಂದೆ ಬ್ಯಾಂಕ್‌ ದಿವಾಳಿಯಾಗಿ ಬೆಂಗಳೂರು ಡಿಸಿಸಿ ಬ್ಯಾಂಕಿನೊಂದಿಗೆ ವಿಲೀನವಾಗುವ ಸ್ಥಿತಿ ಎದುರಾಗಿತ್ತು. ದಿವಾಳಿಯಾಗಿ ಠೇವಣಿ ಹಣವನ್ನು ವಾಪಸ್ಸು ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬ್ಯಾಂಕ್‌ ಈಗ ಸಾವಿರ ಕೋಟಿ ಸಾಲ ನೀಡುವಷ್ಟರ ಉನ್ನತಿಗೇರಲು ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿಯೇ ಕಾರಣ ಎಂಬ ಸತ್ಯ ಅರಿತು ಮಾತನಾಡಬೇಕು ಎಂದು ಬ್ಯಾಂಕ್‌ ವಿರುದ್ಧ ಮಾತನಾಡುವವರಿಗೆ ಟಾಂಗ್‌ ನೀಡಿದರು.

Advertisement

ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಕಳೆದ ಐದು ವರ್ಷ ಗಳಿಂದ ಮನೆ ಬಾಗಿಲಿಗೆ ಸಾಲ ತಲುಪಿಸಿದ್ದೇವೆ. ಮಹಿಳೆಯರಿಗೆ ಇಡೀ ದೇಶದಲ್ಲೇ ಅತಿ ಹೆಚ್ಚು 800 ಕೋಟಿ ಸಾಲ ನೀಡಿದ ಹೆಗ್ಗಳಿಕೆ ನಮ್ಮದು. ತಾಯಂದಿರು ದಲ್ಲಾಳಿಗಳ ಹಾವಳಿಗೆ ತುತ್ತಾಗದಿರಿ ಎಂದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ವಾಣಿಜ್ಯ ಬ್ಯಾಕುಗಳಲ್ಲಿ ಠೇವಣಿಯಿಟ್ಟ ನಿಮ್ಮ ಹಣ ಪಡೆಯಲು ಗಂಟೆಗಟ್ಟಲೇ ಕಾಯಬೇಕು. ಡಿಸಿಸಿ ಬ್ಯಾಂಕ್‌ ಮನೆಬಾಗಿಲಿಗೆ ಬಂದು ನಿಮ್ಮನ್ನು ಕೂರಿಸಿ ಸಾಲ ನೀಡುತ್ತದೆ. ಡಿಸಿಸಿ ಬ್ಯಾಂಕ್‌ ನಮ್ಮ ಕುಟುಂಬ ಎಂದು ಭಾವಿಸಿ ಪಡೆದ ಸಾಲ ಸದ್ಬಳಕೆ ಮಾಡಿಕೊಳ್ಳಿ, ಸಮರ್ಪಕವಾಗಿ ಮರುಪಾವತಿಸಿ ಎಂದು ಸಲಹೆ ನೀಡಿದರು.

ನಿರ್ದೇಶಕ ಕೆ.ವಿ.ದಯಾನಂದ್‌ ಮಾತನಾಡಿ, ನಬಾರ್ಡ್‌ ನೆರವು ಕೇವಲ 71 ಕೋಟಿ ರೂ. ಉಳಿದದ್ದನ್ನು ಬ್ಯಾಂಕ್‌ ಠೇವಣಿ ಹಣದಲ್ಲೇ ಸಾಲ ನೀಡುತ್ತಿರುವುದು. ನಬಾರ್ಡ್‌ಗೆ ನಾವು ಬಡ್ಡಿ ಕಟ್ಟುತ್ತೇವೆ. ನಿಮಗೆ ನೀಡುವ ಸಾಲದ ಬಡ್ಡಿಯನ್ನು ಸರ್ಕಾರ ತುಂಬುತ್ತಿದೆ ಎಂದರು. ನಗರಸಭೆ ಮಾಜಿ ಸದಸ್ಯ ಮುರಳಿಗೌಡ ಮಾತನಾಡಿ, ಆರ್ಥಿಕವಾಗಿ ಸತ್ತುಹೋಗಿದ್ದ ಬ್ಯಾಂಕಿಗೆ ಬ್ಯಾಲಹಳ್ಳಿ ಗೋವಿಂದ ಗೌಡರು ಜೀವ ತುಂಬಿದ್ದಾರೆ. ಇಂತಹ ಒಳ್ಳೆಯ ಕೆಲಸವನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು. ತಾಯಂದಿರು, ರೈತರಿಗೆ ನೆರವಾಗುತ್ತಿರುವ ಬ್ಯಾಂಕ್‌ ವಿರುದ್ಧ ರಾಜಕೀಯ ಟೀಕೆ ಸರಿಯಲ್ಲ ಎಂದರು.

ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಮಹಿಳಾ ಸಂಘಗಳ ಸದಸ್ಯರು ಹಾಜರಿದ್ದು ಸಾಲದ ಚೆಕ್‌ ಸ್ವೀಕರಿಸಿದರು.

ಟಿಎಪಿಸಿಎಂಎಸ್‌ ನಿರ್ದೇಶಕ ಮೂರಾಂಡಹಳ್ಳಿ ಗೋಪಾಲ್, ಛತ್ರಕೋಡಿಹಳ್ಳಿ ಗ್ರಾ.ಪಂ ಸದಸ್ಯ ಕುಮಾರ್‌, ಬಿಜೆಪಿ ಮುಖಂಡ ಸತ್ಯನಾರಾಯಣರಾವ್‌, ಬ್ಯಾಂಕಿನ ವ್ಯವಸ್ಥಾಪಕ ಅಂಬರೀಷ್‌, ಸೂಪರ್‌ ವೈಸರ್‌ ಅಮಿನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next