ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ 13 ಹೊಸ ಶಾಖೆಗಳ ಆರಂಭಕ್ಕೆ ಸಹಕಾರ ಇಲಾಖೆ ಅನುಮತಿ ನೀಡಿದ್ದು, ಇದರಿಂದ ಗ್ರಾಹಕ ಸೇವೆ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹರ್ಷ ವ್ಯಕ್ತಪಡಿಸಿದರು.
ಶನಿವಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದರು. ಗ್ರಾಹಕ ಸೇವೆ ಹೆಚ್ಚಿಸುವ ಹಾಗೂ ರೈತರು, ಮಹಿಳೆಯರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವ ಸದುದ್ದೇಶದಿಂದ ಹೊಸ ಶಾಖೆಗಳ ಅನುಮತಿಗೆ ಸಹಕಾರ ಸಂಘಗಳ ನಿಬಂಧಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಹೇಳಿದರು.
ಇದೀಗ ಶಾಖೆಗಳ ಆರಂಭಕ್ಕೆ ಒಪ್ಪಿಗೆ ನೀಡಿರುವ ಸಹಕಾರ ಇಲಾಖೆ ಈ ಸಂಬಂಧ ನಬಾರ್ಡ್‌ಗೆ ಶಿಫಾರಸುಮಾಡಿದೆ. ಪ್ರಸ್ತಾವನೆಯನ್ನು ನಬಾರ್ಡ್ ಆರ್‌ಬಿಐಗೆಕಳುಹಿಸಲಿದ್ದು, ಅನುಮತಿ ಸಿಗುವುದು ಖಚಿತ ಎಂದು ಸ್ವಷ್ಟಪಡಿಸಿ, ಅತಿ ಶೀಘ್ರ ಹೊಸ ಶಾಖೆಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.
ಆರ್ಥಿಕ ಭದ್ರತೆಗೆ ಒತ್ತು: ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ 13 ಹೊಸ ಶಾಖೆಗಳ ಆರಂಭ, ಬ್ಯಾಂಕಿನ ವೇಗದ ಅಭಿವೃದ್ಧಿ ಹಿನ್ನಲೆಯಲ್ಲಿ ಷೇರು ಬಂಡವಾಳ ಹೆಚ್ಚಿಸಲು ಕ್ರಮವಹಿಸಲು ಸೂಚಿಸಿದ ಅವರು, ಸಾಲ ನೀಡಿಕೆ, ವಸೂಲಾತಿ, ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡುವ ಮೂಲಕ ಬ್ಯಾಂಕ್ ಲಾಭ ಗಳಿಸುವಂತೆ ಮಾಡುವುದರ ಜತೆಗೆ ಎನ್‌ಪಿಎ ಕಡಿಮೆ ಮಾಡಿ ಬ್ಯಾಂಕಿನ ನೆಟ್‌ವರ್ಕ್ ಉತ್ತಮಪಡಿಸಲು ಕ್ರಮವಹಿಸಲಾಗುವುದು ಎಂದರು.
Related Articles
ಬ್ಯಾಂಕಿನ ಸಿಬ್ಬಂದಿ ಠೇವಣಿ ಸಂಗ್ರಹಕ್ಕೆ ನೀಡಿರುವ ಗುರಿ ಸಾಧನೆ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದ ಅವರು, ಠೇವಣಿ, ಸಾಲ ವಸೂಲಾತಿ ಪ್ರಗತಿಯನ್ನು ಆಧರಿಸಿಯೇ ಸಿಬ್ಬಂದಿಗೆ ಬ್ಯಾಂಕಿನ ಸೌಲಭ್ಯ, ಪದೋನ್ನತಿ ನೀಡಲು ಕ್ರಮ ಜರುಗಿಸಲಾಗುವುದು ಹಾಗೂ ಗುರಿ ಸಾಧಿಸಿದ ಸಿಬ್ಬಂದಿ ವಿರುದ್ದ ಸೇವಾ ನಿಯಮಗಳಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಮಧ್ಯಮಾವಧಿ ಸಾಲ ಕಡಿತಕ್ಕೆ ಸಲಹೆ: ಇದೇ ವೇಳೆ ಬ್ಯಾಂಕಿನಿಂದ 40 ಲಕ್ಷದವರೆಗೂ ಮಧ್ಯಮಾವಧಿ ಸಾಲದ ಮಿತಿ ನೀಡಲಾಗಿದೆ. ಆದರೆ, ಇದನ್ನು ವಸೂಲು ಮಾಡುವುದು ಕಷ್ಟವಾಗುತ್ತಿರುವುದರಿಂದ ಬ್ಯಾಂಕಿನ ಆರ್ಥಿಕ ಭದ್ರತೆ ದೃಷ್ಟಿಯಿಂದಮಧ್ಯಮಾವಧಿ ಸಾಲದ ಮಿತಿಯನ್ನು 10 ಲಕ್ಷಕ್ಕೆ ನಿಗದಿಮಾಡಲು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಹೊಸ ಶಾಖೆಗಳು ಶೀಘ್ರ ಚಾಲ್ತಿಗೆ: ನಬಾರ್ಡ್ ಎಜಿಎಂ ಮನೋಜ್‌ಕುಮಾರ್ ಹೊಸ ಶಾಖೆಗಳ ಕುರಿತು ಮಾಹಿತಿ ನೀಡಿ, ಸಹಕಾರ ಇಲಾಖೆ ಸಲ್ಲಿಸಿರುವ ಹೊಸ ಶಾಖೆಗಳಕುರಿತಾದ ಪ್ರಸ್ತಾವನೆಗೆ ನಬಾರ್ಡ್ ಒಪ್ಪಿಗೆ ನೀಡಿದ್ದು,ಅಂತಿಮವಾಗಿ ಪ್ರಸ್ತಾವನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡುತ್ತಿದ್ದು, ಅತಿ ಶೀಘ್ರ ಅನುಮತಿ ಸಿಗಲಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕ ರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಚ್ಚಯ್ಯ ರಾಪುರಿ,ಲೆಕ್ಕಪರಿಶೋಧನಾ ಉಪನಿರ್ದೇಶಕ ಶ್ರೀಕಾಂತ್‌ರಾವ್, ಸಹ ಕಾರ ಸಂಘಗಳ ಉಪನಿಬಂಧಕ ಸಿ.ಎಸ್.ಅಸೀಫ್ ಉಲ್ಲಾ ಅನೀಫ್,ಅಪೆಕ್ಸ್ ಬ್ಯಾಂಕ್ ಎಜಿಎಂ ಎ.ಎಸ್. ವರದ ರಾಜು, ಡಿಸಿಸಿ ಬ್ಯಾಂಕ್ ಎಂಡಿ ಬಿ.ಆರ್. ಕೃಷ್ಣಮೂರ್ತಿ, ಎಜಿಎಂ ಎಂ.ಆರ್.ಶಿವಕುಮಾರ್,ಖಲೀ ಮುಲ್ಲಾ, ಹುಸೇ ನ್ ಸಾಬ್ ದೊಡ್ಡಮುನಿ, ವ್ಯವಸ್ಥಾಪಕರಾದ ಭಾನು ಪ್ರಕಾಶ್, ಅಮ್ಜದ್‌ಖಾನ್, ಬೇಬಿ ಶಾಮಿಲಿ ಇತರರಿದ್ದರು.
ಹೊಸ ಶಾಖೆಗಳು : ಅವಿಭಜಿತ ಜಿಲ್ಲೆಯ ವ್ಯಾಪ್ತಿಯಲ್ಲಿ ಕೋಲಾರ ತಾಲೂಕಿನ ವೇಮಗಲ್, ಡೇರಿ ಶಾಖೆ, ಮಾಲೂರಿನ ಚಿಕ್ಕತಿರುಪತಿ, ಬಂಗಾರಪೇಟೆ ತಾಲೂಕಿನ ಕಾಮಸಮುದ್ರ, ಕೆಜಿಎಫ್ ತಾಲೂಕಿನ ಬೇತ ಮಂಗಲ, ಮುಳಬಾಗಿಲು ತಾಲೂಕಿನ ನಂಗಲಿ, ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ, ಚಿಂತಾ ಮಣಿ ತಾಲೂಕಿನ ಕೈವಾರ ಕ್ರಾಸ್, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ, ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ, ಚಿಕ್ಕಬಳ್ಳಾಪುರ ಡೇರಿ ಶಾಖೆ, ಬಾಗೇಪಲ್ಲಿ ತಾಲೂಕಿನ ಚೇಳೂರು, ಗೌರಿಬಿ ದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ಹೊಸ ಶಾಖೆಗಳು ಆರಂಭಗೊಳ್ಳಲಿದೆ ಎಂದು ಹೇಳಿದರು.