Advertisement

ಅಲೆಮಾರಿಗಳ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ

02:33 PM Aug 07, 2019 | Suhan S |

ಹಾವೇರಿ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಇಲ್ಲಿಯ ನಾಗೇಂದ್ರನಮಟ್ಟಿ ಹಾಗೂ ಶಾಂತಿನಗರದ ಅಲೆಮಾರಿಗಳ ವಾಸ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಆಲಿಸಿದರು.

Advertisement

ರಸ್ತೆ ಹಾಗೂ ಚರಂಡಿಗಳು ಸಮರ್ಪಕ ನಿರ್ವಹಣೆ ಇಲ್ಲದೆ ಮನೆಗಳಿಗೆ ನೀರು ನುಗ್ಗುತ್ತಿರುವ ಕುರಿತಂತೆ ನಾಗೇಂದ್ರನಮಟ್ಟಿ ನಿವಾಸಿಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಬುಧವಾರದಿಂದಲೇ ಕಾಮಗಾರಿ ಆರಂಭಿಸುವಂತೆ ಸ್ಥಳದಲ್ಲಿದ್ದ ಪೌರಾಯುಕ್ತ ಬಸವರಾಜ ಜಿದ್ದಿ ಅವರಿಗೆ ಸೂಚನೆ ನೀಡಿದರು.

ಶಾಂತಿನಗರ ಹೊರವಲಯದಲ್ಲಿರುವ ಅಲೆಮಾರಿ ಕ್ಯಾಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾತ್ಕಾಲಿಕ ಟೆಂಟಿನಲ್ಲಿ ನೀರು ಹರಿದು ತೀವ್ರ ತೊಂದರೆ ಅನುಭವಿಸುತ್ತಿದ್ದ ಅಲೆಮಾರಿ ಜನರ ಸಂಕಷ್ಟಗಳನ್ನು ಕಂಡ ಜಿಲ್ಲಾಧಿಕಾರಿಗಳು ತಕ್ಷಣವೇ ಅವರನ್ನು ಸ್ಥಳಾಂತರಿಸಿ ಪರಿಹಾರ ಕೇಂದ್ರ ಸ್ಥಾಪಿಸಿ ತಾತ್ಕಾಲಿಕ ಪುನರ್‌ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್‌ ಶಿವಕುಮಾರ ಅವರಿಗೆ ಸೂಚಿಸಿದರು.

ಹಾನಗಲ್ಲ ರಸ್ತೆ ಎಪಿಎಂಸಿ ಹತ್ತಿರದ ಹಾಗೂ ಹೆಗ್ಗೇರಿ ರಸ್ತೆಯ ಚರಂಡಿ ವ್ಯವಸ್ಥೆ ಹಾಗೂ ರಾಜಾ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ಲಾಸ್ಟಿಕ್‌ ಕಸಕಡ್ಡಿಯಿಂದ ಸರಾಗವಾಗಿ ನೀರು ಹರಿಯಲು ತಡೆಯಾಗುತ್ತಿರುವ ಕುರಿತಂತೆ ಪರಿಶೀಲಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಸೇರಿದಂತೆ ಅಂಗಡಿಯ ತ್ಯಾಜ್ಯವನ್ನು ರಸ್ತೆ, ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯದೇ ವೈಜ್ಞಾನಿಕವಾಗಿ ವಿಲೇವಾರಿಮಾಡಬೇಕು. ಸರಿಯಾಗಿ ವಿಲೇವಾರಿ ಮಾಡದ ಅಂಗಡಿ ಮಾಲೀಕರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next