Advertisement

ವದಂತಿ ಹಬ್ಬಿಸದಂತೆ ಡಿಸಿ ಎಚ್ಚರಿಕೆ; ಇಂದು ಪ್ರೌಢ ಶಾಲೆ ತರಗತಿ ಆರಂಭ

01:11 AM Feb 14, 2022 | Team Udayavani |

ಉಡುಪಿ: ಹಿಜಾಬ್‌-ಕೇಸರಿ ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ತಪ್ಪು ಸಂದೇಶ, ಸುಳ್ಳು ವದಂತಿಗಳನ್ನು ಹರಡ ಬಾರದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಈ ವಿಚಾರವಾಗಿ ವಿವಿಧ ಸಂಘಟನೆಗಳು ಮತ್ತು ಸಮಾಜದ ಮುಖಂಡರ ಸಭೆ ಕರೆದು ನ್ಯಾಯಾಲಯದ ಮಧ್ಯಾಂತರ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಸೂಚನೆ ನೀಡಲು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ಗೊಂದಲ, ಶಾಂತಿ ಸುವ್ಯವಸ್ಥೆಗೆ ಭಂಗವಾಗದಂತೆ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮುಂದುವರಿಯಬೇಕು. ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಡಳಿತದೊಂದಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಸಮವಸ್ತ್ರದ ವಿವಾದದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಧ್ಯಾಂತರ ಆದೇಶ ಪಾಲಿಸಲು ಜಿಲ್ಲೆಯ ಎಲ್ಲ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ, ಕಾಲೇಜು ಆಡಳಿತ ಮಂಡಳಿ, ಕಾಲೇಜು ಶಿಸ್ತು ಸಮಿತಿ ಮತ್ತು ಶಿಕ್ಷಕರ, ಪಾಲಕರ ಸಭೆ ಕರೆದು ಕಾಲೇಜಿನಲ್ಲಿ ಯಾವುದೇ ಗೊಂದಲ ಆಗದಂತೆ ಕ್ರಮ ಕೈಗೊಳ್ಳಲು ಪದವಿಪೂರ್ವ, ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದ್ದಾರೆ.

ಇಂದು ಪ್ರೌಢಶಾಲೆ ಪುನರಾರಂಭ
ಹಿಜಾಬ್‌-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಪ್ರೌಢಶಾಲೆಗಳಿಗೂ ರಜೆ ನೀಡಲಾಗಿತ್ತು. ನ್ಯಾಯಾಲಯದ ಮಧ್ಯಾಂತರ ಆದೇಶ ಪಾಲಿಸಿ ಸೋಮವಾರದಿಂದ ಪ್ರೌಢಶಾಲೆ (9 ಮತ್ತು 10ನೇ ತರಗತಿ) ಆರಂಭಿಸುವಂತೆ ಈಗಾಗಲೇ ಸರಕಾರ ಸೂಚನೆ ನೀಡಿದೆ. ಅದರಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಗಳು ಪ್ರೌಢಶಾಲೆ ತರಗತಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ. ವಿದ್ಯಾರ್ಥಿಗಳು ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ನಿರ್ದೇಶನವನ್ನು ನೀಡಲಾಗಿದೆ.

ಭದ್ರತೆಗೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಎಂದಿನಂತೆ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಫೆ. 15 ಮತ್ತು ಪದವಿ ವಿದ್ಯಾರ್ಥಿಗಳಿಗೆ ಫೆ. 16ರ ವರೆಗೆ ರಜೆ ಘೋಷಿಸಲಾಗಿದೆ.

Advertisement

ದ.ಕ.ದಲ್ಲೂ ನಿಷೇಧಾಜ್ಞೆ
ಮಂಗಳೂರು: ಪ್ರೌಢ ಶಾಲಾ ತರಗತಿಗಳನ್ನು ಫೆ. 14ರಿಂದ ಪುನರಾರಂಭಿಸಲು ಸರಕಾರ ಆದೇಶ ನೀಡಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ವಸ್ತ್ರ ಸಂಬಂಧ ವಿವಾದ ಹುಟ್ಟಿಕೊಳ್ಳದಂತೆ ಬಂದೋಬಸ್ತು ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಫೆ. 14ರ ಬೆಳಗ್ಗಿನ 6ರಿಂದ ಫೆ. 19ರ ಸಂಜೆ 6ರ ತನಕ ಎಲ್ಲ ಶಾಲಾ ಕಾಲೇಜುಗಳ ಸುತ್ತಮುತ್ತಲ 200 ಮೀ. ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆ. 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ನಗರಕ್ಕೆ ಸಂಬಂಧಿಸಿ ಪೊಲೀಸ್‌ ಕಮಿಶನರ್‌ ಎನ್‌. ಶಶಿಕುಮಾರ್‌ ಆದೇಶ ಹೊರಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next