ನೆಲಮಂಗಲ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮ ತಾಲೂಕು ಮಟ್ಟದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಶ್ರೀನಿವಾಸ್ ಕೋವಿಡ್ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾಗಬೇಕೆಂದು ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ವಿಶ್ವೇಶ್ವರಪುರ ಸಮೀಪದ ಟಿಬೇಟಿಯನ್ ಹಾಸ್ಟೆಲ್‌ನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಹಾಗೂತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ಸಹ ನೀಡಿದರು.
300 ಬೆಡ್ ವ್ಯವಸ್ಥೆ: ನೆಲಮಂಗಲ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ಸಿದ್ಧಾರ್ಥ ಆಸ್ಪತ್ರೆ ಸೇರಿದಂತೆ 300ಕ್ಕೂ ಹೆಚ್ಚು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು ಸಿದ್ಧಾರ್ಥ ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಹಾಗೂ 150 ಸಾಮಾನ್ಯ ಬೆಡ್‌ಗಳ ಜತೆ 500ಲೀ ಆಕ್ಸಿಜನ್ ಪ್ಲಾಂಟ್‌ಸಹ ಇರುವ ಕಾರಣ ತಾಲೂಕಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ನಗರದಲ್ಲಿ ಟಿಬೇಟಿಯನ್ ಹಾಸ್ಟೆಲ್‌ನಲ್ಲಿಯೂ ಸಹ ಕೋವಿಡ್ ಸೆಂಟರ್ ಮಾಡಲು ತಿಳಿಸಲಾಗಿದ್ದು ಸಕಲಸಿದ್ಧತೆಯಿಂದ ಕೋವಿಡ್ ತಡೆಯಲು ತಯಾರಾಗಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೆಂಡಾಮಂಡಲ: ಬೆಳಗ್ಗೆ 10ಗಂಟೆ ಸುಮಾರಿಗೆ ಸಭೆ ಆರಂಭಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್ ಸಭೆಗೆ ತಡವಾಗಿ ಬಂದ ಅಧಿಕಾರಿಗಳಿಗೆ ಖಾರವಾಗಿಯೇ ಮಾತನಾಡಿದರು. ಸಭೆಯಲ್ಲಿ ದಾಖಲಾತಿಗಳನ್ನು ಹಾಗೂ ಮಾಹಿತಿಗಳನ್ನು ನೀಡಲು ತಡಬಡಾಯಿಸಿದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಕೊರೊನಾ ಸಮಯದಲ್ಲಿ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಎರಡನೇ ಅಲೆಯಲ್ಲಿ ಕೆಲಸ ಮಾಡದವರ ಪಟ್ಟಿ ಸಿದ್ಧವಾಗಿದ್ದು ಈ ಭಾರಿ ಮರುಗಳಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರಿಹಾರ ಪೂರ್ಣ: ಜಿಲ್ಲೆಯಲ್ಲಿ ಉಳಿಕೆಯಿದ್ದ 4 ಸಾವಿರ ರೈತರ ಪರಿಹಾರ ಹಣವನ್ನು ಪಾವತಿ ಮಾಡಲಾಗಿದ್ದು ಮಳೆಯಿಂದ ಹಾನಿಯಾಗಿದ್ದ 1350 ಮನೆಗಳಲ್ಲಿ ಪರಿಹಾರ ನೀಡಲು ಬಾಕಿಯಿದ್ದ 53 ಮನೆಗಳಿಗೆ ಪರಿಹಾರ ನೀಡಲಾಗಿದೆ. 645 ಜನರಿಗೆ ಕೊರೊನಾದಿಂದ ಮೃತರಾದ ಕುಟುಂಬಕ್ಕೆ ಪರಿಹಾರ ನೀಡಿದ್ದು ಉಳಿಕೆ ಪಾವತಿಯಾಗದ 30 ಜನರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಎಂದರು.
ಅಪರ ಜಿಲ್ಲಾಧಿಕಾರಿ ವಿಜಯ,ಡಿಡಿಪಿಐ ಗಂಗಮಾರೇಗೌಡ, ಎಸಿ ಅರುಳ್‌ಕುಮಾರ್, ತಹಶೀಲ್ದಾರ್ ಮಂಜುನಾಥ್, ಇಒ ಮೋಹನ್ ಕುಮಾರ್, ನಗರಸಭೆ ಆಯುಕ್ತ ಮಂಜು ನಾಥ್, ಆರೋಗ್ಯಾಧಿಕಾರಿ ಹರೀಶ್ ಇದ್ದರು.
ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಆಕ್ಸಿಜನ್ ಬೆಡ್‌ಗಳು ಸೇರಿದಂತೆ ಸಕಲ ಸೌಲಭ್ಯಗಳನ್ನು ತಯಾರು ಮಾಡಿಕೊಂಡಿದ್ದು ಸಾರ್ವಜನಿಕರು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು,ಎಲ್ಲಾ ತಾಲೂಕಿನಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸಲಹೆಯ ಜತೆ ಮಾರ್ಗದರ್ಶನ ನೀಡಿದ್ದು ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
– ಶ್ರೀನಿವಾಸ್, ಜಿಲ್ಲಾಧಿಕಾರಿ