ನಾಗಮಂಗಲ: ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಉಳಿದೆಲ್ಲಾ ತಾಲೂಕುಗಳಿಗಿಂತ ನಾಗಮಂಗಲದಲ್ಲಿ ಫಿಜಿಷಿಯನ್ ಸೇರಿ ಎಲ್ಲ ಬಗೆಯ ತಜ್ಞ ವೈದ್ಯರಿದ್ದಾರೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸುವ ಸಲುವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ತೀವ್ರ ನಿಗಾ ಘಟಕ ಸೇರಿ ಡಯಾಲಿಸಿಸ್, ಶಸ್ತ್ರ ಚಿಕಿತ್ಸಾ ಕೇಂದ್ರ ಸಕ್ರಿಯವಾಗಿದೆ. ಎಲ್ಲ ರೀತಿಯ ತಜ್ಞ ವೈದ್ಯರು ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆಂದರು.
ಸೋಂಕಿತ ರೋಗಿಗಳನ್ನು ಸಂಪರ್ಕಿಸಿದ ವೇಳೆ ಉತ್ತಮ ಗುಣಮಟ್ಟದ ಔಷಧ ಮತ್ತು ಒಳ್ಳೆಯ ಊಟದ ವ್ಯವಸ್ಥೆ ಸಿಗುತ್ತಿದೆ ಎಂದು ತಿಳಿದುಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಗುವ ವ್ಯವಸ್ಥೆಯೂ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಗುತ್ತಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವ ವಿಷಯ ಕೇಳಿ ನನಗೆ ಖುಷಿಯಾಗುತ್ತಿದೆ. ಇದೇ ರೀತಿ ಚಿಕಿತ್ಸೆ ಮುಂದುವರಿಸಿದರೆ ಕೋವಿಡ್ ವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರು ವಿಭಾಗದ 7 ಜಿಲ್ಲೆಗಳಲ್ಲಿಯೇ ಮಂಡ್ಯದಲ್ಲಿ ಮರಣ ಪ್ರಮಾಣದ ಸಂಖ್ಯೆ ಶೇ.0.9ರಷ್ಟಿದ್ದು, ಪ್ರಕರಣ ಹೆಚ್ಚಾದ ಮಾತ್ರಕ್ಕೆ ಕೋವಿಡ್ ಹೆಚ್ಚಾಯಿತು ಎಂದು ಭಾವಿಸ ಬಾರದು. ಲಾಕ್‌ಡೌನ್ ಇಲ್ಲದಿರುವುದರಿಂದ ಜನ ಸಂಪೂರ್ಣವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೋವಿಡ್ ಬರುವ ಸಾಧ್ಯತೆಯಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಬೆಳೆ ಸಮೀಕ್ಷೆಯಿಂದ ಅನುಕೂಲ: ಬೆಳೆ ಸಮೀಕ್ಷೆ ಮಾಡುವುದರಿಂದ ವಿವಿಧ ರೀತಿಯ ಅನುಕೂಲವಾಗಲಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ರಾಗ ಖರೀದಿಗೆ ರೈತ ಇಂತಿಷ್ಟು ಬೆಳೆ ಬೆಳೆದಿದ್ದಾರೆಂದು ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು, ಅಲ್ಲದೆ ಆಕಸ್ಮಿಕವಾಗಿ ನೆರೆ ಅಥವಾ ಬರದಿಂದ ನಷ್ಟವಾದಲ್ಲಿ ಅಂತಹ ಬೆಳೆಗಳಿಗೆ ಪರಿಹಾರ ನೀಡಲು ಅನುಕೂಲವಾಗುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ ರಾಗಿ, ಭತ್ತ, ಕಬ್ಬು ಸೇರಿದಂತೆ ಇಂತಿಷ್ಟು ಪ್ರಮಾಣದಲ್ಲಿ ರೈತರು ಬೆಳೆಗಳನ್ನು ಬೆಳೆಯುತ್ತಿದ್ದಾರೆಂದು ವೈಜ್ಞಾನಿಕವಾದ ಮಾಹಿತಿ ಲಭ್ಯವಾಗುತ್ತದೆ ಎಂದರು.
ತಹಶೀಲ್ದಾರ್ ಕುಂಞ ಅಹಮ್ಮದ್, ತಾಪಂ ಇಒ ಡಾ.ಎಂ.ಆರ್.ಅನಂತರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರಿದ್ದರು