ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಪ್ರದೇಶ ಎಂದೇ ಗುರುತಿಸಲ್ಪಟ್ಟ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಮೇದಿನಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಶನಿವಾರ ನಡೆಯಿತು.
ಜಿಲ್ಲಾಧಿಕಾರಿಗಳೊಂದಿಗೆ ಕಂದಾಯ ಇಲಾಖೆ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಾರ್ವಜನಿಕ ಅಹವಾಲು ಆಲಿಸಿದರು. ಮೇದಿನಿಯ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದರು. ನಂತರ ಸ್ಥಳೀಯರ ಬೈಕ್ ಏರಿ ಗ್ರಾಮದಲ್ಲಿ ಸಂಚರಿಸಿ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದರಲ್ಲದೆ, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸಮಸ್ಯೆ ಶೀಘ್ರ ಪರಿಹರಿಸುವಂತೆ ಸೂಚನೆ ನೀಡಿದರು.
ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುವ ಆಟಿಕೆಗಳನ್ನು ಮಕ್ಕಳಿಗೆ ವಿತರಿಸಿದ ಜಿಲ್ಲಾಧಿಕಾರಿಗಳು ಮಧ್ಯಾಹ್ನ ಶಾಲೆಯಲ್ಲೇ ಬಿಸಿಯೂಟ ಮಾಡಿದರು. ಈ ವೇಳೆ ಮಕ್ಕಳ ಜೊತೆ ಕೆಲ ಸಮಯ ಕಳೆದರು. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಸೇರಿದಂತೆ ರಸ್ತೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಯಲ್ಲಿ ತೊಂದರೆಯಾಗುತ್ತಿದ್ದು, ಸರಿಪಡಿಸಿಕೊಡುವಂತೆ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಂತಹ ಸಮಸ್ಯೆಗಳು ಕಂಡುಬಂದರೆ ಸರ್ವರ್ ಇಲ್ಲದೆಯೂ ಮ್ಯಾನುವೆಲ್ ಮೂಲಕ ಪಡಿತರ ನೀಡಬೇಕು.
ಈ ಬಗ್ಗೆ ತಾಲೂಕು ಅಧಿಕಾರಿಗಳು ಗಮನಹರಿಸಿ ಎಂದು ಡಿಸಿ ಸೂಚಿಸಿದರು. ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಮೇದಿನಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗಜಾನನ ಪಟಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಪವಿಭಾಗಾ ಧಿಕಾರಿ, ರಾಹುಲ್ ಪಾಂಡೆ, ತಹಶೀಲ್ದಾರ ವಿವೇಕ ಶೇಣ್ವಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಇಲಾಖಾ ಮಟ್ಟದ ಅಧಿಕಾರಿಗಳು ಸಿಬ್ಬಂದಿ ಇದ್ದರು.